ಸಾರಾಂಶ
ಯಾದಗಿರಿ: ಜಿಲ್ಲೆಯ ವಸತಿ ಶಾಲೆಯಲ್ಲಿನ ನೂರಾರು ಮಕ್ಕಳಿಗೆ ಚರ್ಮರೋಗ (ತುರಿಕೆ) ಪ್ರಕರಣ ಕುರಿತು ಬುಧವಾರ ಸದನದಲ್ಲಿ ಪ್ರಸ್ತಾಪಿಸಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಸ್ವಚ್ಛತೆ ಕೊರತೆ, ಕಲುಷಿತ ನೀರು ಮುಂತಾದ ಕಾರಣಗಳಿಂದಾಗುತ್ತಿರುವ ಇಂತಹ ಪ್ರಕರಣಗಳ ತಡೆಗಟ್ಟಬೇಕು ಎಂದು ಸರ್ಕಾರಕ್ಕೆ ಕೋರಿದರು.
15 ದಿನಗಳ ಹಿಂದೆ ಮಕ್ಕಳ ಆಯೋಗ ತಮ್ಮ ಮತಕ್ಷೇತ್ರದಲ್ಲಿ ಬಂದಿದ್ದಾಗ ಇಲ್ಲಿನ ಶಾಲೆಯೊಂದರಲ್ಲಿನ ಅನೇಕ ಮಕ್ಕಳ ಚರ್ಮದಲ್ಲಿ ತುರಿಕೆ ಕಂಡುಬಂದಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸ್ವಚ್ಛತೆ ಇಲ್ಲದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ ಎಂದು ಸದನದಲ್ಲಿ ತಿಳಿಸಿದ ಶಾಸಕ ಕಂದಕೂರು, ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಇಲ್ಲಿನ ಸುಮಾರು 350ಕ್ಕೂ ಹೆಚ್ಚು ಮಕ್ಕಳಲ್ಲಿ ಇಂತಹ ಚರ್ಮರೋಗ ಕುರಿತು ನ.29ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಆಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ್ದರು. 196ಕ್ಕೂ ಹೆಚ್ಚು ಮಕ್ಕಳಲ್ಲಿ ಈ ರೋಗ ಕಂಡು ಬಂದಿತ್ತು.
ಬಾಲ್ಯವಿವಾಹ ಹೆಚ್ಚಳ: ಶಾಸಕ ಕಂದಕೂರು ಆತಂಕಇನ್ನು, ಜಿಲ್ಲೆಯಲ್ಲಿ 13 ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಿದೆ ಎಂದು ಇಲಾಖೆ ಮಾಹಿತಿ ನೀಡಿದೆಯಾದರೂ, ಇದರಲ್ಲಿ ಅನೇಕ ಪ್ರಕರಣಗಳ ಮರೆ ಮಾಚಲಾಗಿದೆ ಎಂದು ಶಾಸಕ ಕಂದಕೂರು ತಿಳಿಸಿದರು. ಸರ್ಕಾರ ನೀಡಿದ ವರದಿಯಲ್ಲಿ 13 ಪ್ರಕರಣಗಳು ಇದೆಯೆಂದಿದೆ. ಆದರೆ, ವಾಸ್ತವದಲ್ಲಿ ಅನೇಕ ಪ್ರಕರಣಗಳು ನಡೆದಿದ್ದು, ದಾಳಿಯ ವೇಳೆ ಅಲ್ಲಿಗೆ ಹೋಗುವ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಬಂದ ಪ್ರಕರಣಗಳೇ ಹೆಚ್ಚಿವೆ. ಹೀಗಿರುವಾಗ, ನೈಜ ಪ್ರಕರಣಗಳ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದರು. ಗುರುಮಠಕಲ್ ಭಾಗದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ, ಇಲಾಖೆಯಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸಚಿವರು, ಶಾಸಕರು ಅಥವಾ ಮತ್ತಿತರೆ ಪ್ರಭಾವಗಳಿಂದಾಗಿ ಈ ಪ್ರಕರಣಗಳನ್ನು ಮರೆ ಮಾಚಲಾಗುತ್ತಿದೆ ಎಂದು ಆರೋಪಿಸಿದ ಶಾಸಕ ಶರಣಗೌಡ ಕಂದಕೂರು, ಮೊದಲೇ ನಮ್ಮಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಹೀಗಿರುವಾಗ, ಬಾಲ್ಯವಿವಾಹವಾದ ಮಕ್ಕಳು ಗರ್ಭಿಣಿಯರಾಗಿ, ಹೆರಿಗೆ ವೇಳೆ ಜೀವಾಪಾಯ ಸಾಧ್ಯತೆ ಇದೆಯೆಂದು ಆತಂಕ ವ್ಯಕ್ತಪಡಿಸಿದರು.
------ಬಾಕ್ಸ್
ಕಂದಕೂರು ಕಾಳಜಿ ಶ್ಲಾಘಿಸಿದ ಸಚಿವೆ ಹೆಬ್ಬಾಳಕರ್ಅಸ್ವಚ್ಛತೆಯಿಂದ ವಸತಿ ಶಾಲೆಯ ಮಕ್ಕಳ ಆರೋಗ್ಯ ಹಾಗೂ ಬಾಲ್ಯವಿವಾಹದಿಂದಾಗುವ ಅನಾಹುತಗಳ ಬಗ್ಗೆ ಪ್ರಸ್ತಾಪಿಸಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರ ಕಾಳಜಿ ಮೆಚ್ಚುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದನದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದರು. ಚರ್ಮರೋಗ ಪ್ರಕರಣಗಳ ಹಾಗೂ ಬಾಲ್ಯವಿವಾಹದ ಪ್ರಕರಣಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅನೇಕ ಪ್ರಕರಣಗಳನ್ನು ತಡೆಲಾಗಿದೆ. ಆದರೂ, ಮಾಹಿತಿ ಬಂದಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಸಚಿವೆ ಹೆಬ್ಬಾಳಕರ್ ಹೇಳಿದರು. ಮಹಿಳೆಯರು ಹಾಗೂ ಮಕ್ಕಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಶಾಸಕ ಕಂದಕೂರು ಅವರದ್ದು ಉಜ್ವಲ ರಾಜಕೀಯ ಭವಿಷ್ಯವಿದೆ ಎಂದು ಹೇಳಿದರು.
-------13ವೈಡಿಆರ್10
ಮಕ್ಕಳಿಗೆ ಚರ್ಮರೋಗ ಹಾಗೂ ಬಾಲ್ಯವಿವಾಹ ಬಗ್ಗೆ ಬುಧವಾರ ಸದನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಪ್ರಸ್ತಾಪಿಸಿದರು.