ಶಾಲಾ ಮಕ್ಕಳಿಗೆ ಕೆಟ್ಟ ಮೊಟ್ಟೆ ವಿತರಣೆ

| Published : Dec 14 2023, 01:30 AM IST

ಶಾಲಾ ಮಕ್ಕಳಿಗೆ ಕೆಟ್ಟ ಮೊಟ್ಟೆ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೆಟ್ಟಿರುವ ಮೊಟ್ಟೆ ನೀಡಿದ್ದಾರೆ. ಅವೆಲ್ಲ ದುರ್ವಾಸನೆ ಬೀರುತ್ತಿದ್ದವು ಎಂದು ವಿದ್ಯಾರ್ಥಿಗಳು ಸಿಆರ್‌ಪಿ ಅಧಿಕಾರಿಗಳ ಎದುರು ಬುಧವಾರ ಅಳಲು ತೋಡಿಕೊಂಡಿದ್ದಾರೆ. ಕೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ದೋಟಿಹಾಳ ಸಿಆರ್‌ಪಿ ಈರಣ್ಣ ಕರಡಕಲ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಮೊಟ್ಟೆ, ಬಾಳೆಹಣ್ಣುಗಳ ಕುರಿತು ಪರೀಶಿಲನೆ ನಡೆಸಿದಾಗ ಖುದ್ದಾಗಿ ವಿದ್ಯಾರ್ಥಿಗಳೇ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೆಟ್ಟಿರುವ ಮೊಟ್ಟೆ ನೀಡಿದ್ದಾರೆ. ಅವೆಲ್ಲ ದುರ್ವಾಸನೆ ಬೀರುತ್ತಿದ್ದವು ಎಂದು ವಿದ್ಯಾರ್ಥಿಗಳು ಸಿಆರ್‌ಪಿ ಅಧಿಕಾರಿಗಳ ಎದುರು ಬುಧವಾರ ಅಳಲು ತೋಡಿಕೊಂಡಿದ್ದಾರೆ.

ಕೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ದೋಟಿಹಾಳ ಸಿಆರ್‌ಪಿ ಈರಣ್ಣ ಕರಡಕಲ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಮೊಟ್ಟೆ, ಬಾಳೆಹಣ್ಣುಗಳ ಕುರಿತು ಪರೀಶಿಲನೆ ನಡೆಸಿದಾಗ ಖುದ್ದಾಗಿ ವಿದ್ಯಾರ್ಥಿಗಳೇ ದೂರು ನೀಡಿದ್ದಾರೆ.

ಬುಧವಾರ ನಮಗೆ ಮೊಟ್ಟೆ, ಬಾಳೆಹಣ್ಣು ಎರಡನ್ನೂ ಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ನಂತರ ಸಿಆರ್‌ಪಿ ಈರಣ್ಣ ಕರಡಕಲ್ ಮುಖ್ಯಶಿಕ್ಷಕಿ ಭಾರತಿ ಭಟ್ ಅವರಲ್ಲಿ, ಮಕ್ಕಳ ಅಪೌಷ್ಟಿಕ ನಿವಾರಣೆಗಾಗಿ ಸರ್ಕಾರ ಮೊಟ್ಟೆಗಳನ್ನು ವಿತರಿಸುತ್ತಿದೆ. ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸುವಲ್ಲಿ ನಿರ್ಲಕ್ಷ್ಯ ಭಾವನೆ ತಾಳಬಾರದು. ಮೊಟ್ಟೆ ವಿತರಣೆಯಲ್ಲಿ ವಿಳಂಬವಾಗುತ್ತಿದ್ದರೆ ಸ್ಥಳೀಯ ವ್ಯಾಪಾರಿಗಳ ಮೂಲಕ ಮೊಟ್ಟೆ ಖರೀದಿಸಿ ಮಕ್ಕಳಿಗೆ ಕೊಡಬೇಕು ಎಂದು ಸೂಚನೆ ನೀಡಿದರು.

ಸೋಮವಾರ, ಬುಧವಾರ, ಶುಕ್ರವಾರಂದು ಕಡ್ಡಾಯವಾಗಿ ಎಲ್ಲ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಡಬೇಕು. ಪ್ರತಿದಿನ ಊಟದ ಶುಚಿ-ರುಚಿಯನ್ನು ಇಬ್ಬರು ಶಿಕ್ಷಕರು ನೋಡಿಕೊಳ್ಳಬೇಕು. ಅಡುಗೆಯವರಿಂದ ಸಮರ್ಪಕವಾಗಿ ಕೆಲಸ ಪಡೆದುಕೊಳ್ಳಬೇಕು. ಶಿಕ್ಷಕರಿಗೆ ಜವಾಬ್ದಾರಿ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಶಿಕ್ಷಕಿ ಭಾರತಿ ಭಟ್, ಸೋಮವಾರ ನೀಡಿದ ಮೊಟ್ಟೆಗಳು ಕೆಟ್ಟಿರುವ ಕಾರಣ ಇಂದು ಮೊಟ್ಟೆ ಕೊಟ್ಟಿಲ್ಲ. ಇದೊಂದು ಬಾರಿ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪು ಆಗದಂತೆ ಕೆಲಸ ನಿರ್ವಹಿಸಿಕೊಂಡು ಹೋಗುವೆ ಎಂದು ಹೇಳಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕಡಿವಾಲ, ಸಾಕಷ್ಟು ಬಾರಿ ಮುಖ್ಯಶಿಕ್ಷಕಿಯರಿಂದ ಅನೇಕ ತಪ್ಪುಗಳು ನಡೆಯುತ್ತಿವೆ. ಇದು ಮರುಕಳಿಸಬಾರದು. ಶಿಕ್ಷಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಕಡೆ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದರು.