ಸಾರಾಂಶ
ಶೇಷಮೂರ್ತಿ ಅವಧಾನಿ, ರಾಹುಲ್ ದೊಡ್ಮನಿ
ಕನ್ನಡಪ್ರಭ ವಾರ್ತೆ ಕಲಬುರಗಿಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಉತ್ತರ ಕರ್ನಾಟಕದವರು ಕಟ್ಟಿರುವ ಕನ್ನಡ ಸಂಘ ಕಳೆದ 70 ವರ್ಷಗಳಿಂದ ನಿರಂತರ ಕನ್ನಡ ಭಾಷೆ, ಸಂಸ್ಕೃತಿ ಪೋಷಿಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡು ಸದ್ದಿಲ್ಲದಂತೆ ಮಹತ್ತರ ಸಾಧನೆ ಮಾಡುತ್ತ ಹೊರಟಿದೆ.
ಪೂರ್ವದ ಮ್ಯಾಂಚೆಸ್ಟರ್ ಎಂದೂ ಕರೆಯುವ ಗುಜರಾತ್‌ನ ಅಹ್ಮದಾಬಾದ್‌ನ ಸಾಬರಮತಿ ನದಿ ತೀರದಲ್ಲಿ ಕರ್ನಾಟಕ ಸಂಘ ಹುಟ್ಟಿದ್ದೇ ಬಲು ಅಚ್ಚರಿದಾಯಕ. ದೇಶಕ್ಕೆ ಸ್ವಾತಂತ್ರ ಬಂದಾಗ ಉತ್ತರ ಕರ್ನಾಟದಲ್ಲಿ ಕೈಮಗ್ಗ, ಬಟ್ಟೆ ನೇಯುವ ಕಾಯಕ ಮಾಡಿಕೊಂಡಿದ್ದ ಜನರು ಅಹಮದಾಬಾದ್‌ನತ್ತ ಹೆಜ್ಜೆ ಹಾಕಿದ್ದರು. ಕೆಲಸ ಅರಸಿ ವಲಸೆ ಹೊದ ಕನ್ನಡಿಗರು ಅಲ್ಲಿ ಸುಮ್ಮನೇ ತಾವಾಯ್ತು, ತಮ್ಮ ಉಪಜೀವನವಾಯ್ತೆಂದು ಕೂಡಲಿಲ್ಲ. ಬದಲಾಗಿ ಕನ್ನಡ ಸಂಘದ ಮೂಲಕ ತಮ್ಮ ನೆಲದ ಭಾಷೆ, ಸಂಸ್ಕೃತಿಯನ್ನು ಗುಜರಾತ್‌ನಲ್ಲೂ ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದರು.ಈ ಪೈಕಿ ದಿ.ಫಕೀರಪ್ಪ ಬದನಪೂರ 1947ರ ಫೆ.5ರಲ್ಲಿ ಗುಜರಾತ್‌ನಲ್ಲಿ ಕರ್ನಾಟಕ ಸಂಘ ಕಟ್ಟಿ ಕನ್ನಡಿಗರನ್ನು ಸಂಘಟಿಸುವತ್ತ ಗಮನ ಹರಿಸಿದರು. ಇವರಿಂದ ಆರಂಭಗೊಂಡ ಸಂಘ ಇಂದಿನವರೆಗೂ 60 ಸಾವಿರ ಕನ್ನಡಿಗರ ಮೆಚ್ಚಿನ ಸಂಘವಾಗಿ ಗುಜರಾತ್‌ನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿದೆ. ಇದರಿಂದಾಗಿಯೇ ಕೆಲಸಕ್ಕೆಂದು ಗುಜರಾತ್, ಅಹಮದಾಬಾದ್‌ಗೆ ಹೋದ ಕನ್ನಡಿಗರು ಇಂದಿಗೂ ಕನ್ನಡಿಗರಾಗಿ ಗೌರವದ ಬದುಕು ನಡೆಸಲು ಸಾಧ್ಯವಾಗಿದೆ.
ಕೆಲಸ ಅರಸಿ ಅಹಮದಾಬಾದ್ ಸೇರಿದ ಸಾವಿರಾರು ಕನ್ನಡಿಗರು ಅಲ್ಲಿ ಭದ್ರನೆಲೆ ಕಂಡುಕೊಂಡಿದ್ದಲ್ಲದೆ ಕೈಮಗ್ಗದಿಂದ ಬಟ್ಟೆ ಕಾರ್ಖಾನೆಗಳ ಮಾಲೀಕರಾಗಿಯೂ ಬೆಳೆದು ನಿಂತಿದ್ದಾರೆ.ಬಾಕ್ಸ್)))
ಬಟ್ಟೆ ತಯಾರಿಸುವರರು ಕಟ್ಟಿದ ಸಂಘದೇಶಕ್ಕೆ ಸ್ವಾತಂತ್ರ ಸಿಗುವ ಹೊತ್ತಿನಲ್ಲಿ ಬಟ್ಟೆ ನೇಯ್ಗೆಯನ್ನೇ ಬದುಕಾಗಿಸಿಕೊಂಡಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ, ಬನಹಟ್ಟಿ, ರಬಕವಿ ಸೇರಿದಂತೆ ಹಲವು ಊರುಗಳಲ್ಲಿರುವ ಸಾವಿರಾರು ಜನರಿಗೆ ಭವಿಷ್ಯದ ಭರವಸೆಯಾಗಿ ಕಂಡಿದ್ದೇ ಅಹ್ಮಬಾದ್ ನಗರ. ಗುಜರಾತ್ ನೆಲ ಸೇರಿದ ಕನ್ನಡಿಗರು ಅಲ್ಲಿನ ಪರಿಸರಕ್ಕೆ ಬದುಕು ಹೊಂದಿಸಿಕೊಂಡರೇ ವಿನಃ ತಮ್ಮ ಸಂಸ್ಕಾರ, ಸಂಸ್ಕೃತಿ ಬಿಟ್ಟು ಕೊಡಲಿಲ್ಲ. ಒಬ್ಬರಿಂದ ನೂರಾದರು, ನೂರು ಸಾವಿರಾದರು. ಬಳಿಕ ಗುಜರಾತಿಗಳ ಮನಗೆದ್ದು ಕನ್ನಡಿಗರಾಗಿ ನೆಲೆ ನಿಂತು ಬೆಳೆದಿದ್ದಾರೆ. ಸಾರ್ವಜನಿಕ ಗಣೇಶೋತ್ಸವ, ಗರ್ಭಾ, ಸಂಕ್ರಾಂತಿ, ದೀಪಾವಳಿ, ರಾಜ್ಯೋತ್ಸವ ಎಲ್ಲವನ್ನು ಕನ್ನಡಿಗರನ್ನು ಒಟ್ಟಾಗಿ ಆಚರಿಸುತ್ತಾರೆ.
7 ದಶಕಗಳ ಸೇವೆ:1964ರ ಏ.23ರಂದು ಸಂಘದ ಸಂವಿಧಾನ ರಚಿಸಿ ಅಳವಡಿಸಿಕೊಂಡ ಬಳಿಕ ಸಂಘದ ಪ್ರಥಮ ಅಧ್ಯಕ್ಷರಾಗಿ ಫಕೀರಪ್ಪ ಬದಾನ್‌ಪೂರ ಅವರು ಸಾರಥ್ಯ ವಹಿಸಿಕೊಂಡರು. ಗುಜರಾತ್ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವ ಕೆಲಸ ಮಾಡಿದರು. ಪ್ರಸ್ತುತ ಅಧ್ಯಕ್ಷ ಹಣಮಂತ ಬೆನ್ನೂರ ಕೂಡ ಗುಜರಾತಿ ಕನ್ನಡಿಗರನ್ನು ಸಂಘಟಿಸಿ ಹೊರ ರಾಜ್ಯದಲ್ಲಿ ಕನ್ನಡತನ ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
1961ರಲ್ಲಿ 1ನೇ ಹೊರನಾಡು ಕನ್ನಡ ಸಮ್ಮೇಳನ:1947ರಲ್ಲಿ ಕರ್ನಾಟಕ ಸಂಘ ಹುಟ್ಟಿಕೊಂಡ ಬಳಿಕ 1961ರಲ್ಲಿ ಮುಂಬೈನಲ್ಲಿ ನಡೆದ ಹೊರನಾಡು ಕನ್ನಡ ಸಮ್ಮೇಳನದಲ್ಲಿ ಗುಜರಾತಿ ಕನ್ನಡಿಗರು ಭಾಗಿಯಾಗಿ ತಮ್ಮ ಆಸೆ, ಆಕಾಂಕ್ಷೆಗಳು, ಸಮಸ್ಯೆಗಳನ್ನು ವ್ಯಕ್ತಪಡಿಸಿದ್ದರು. ಅದಾದ ಬಳಿಕ 1972ರಲ್ಲಿ ಅಹಮದಾಬಾದ್ ಕರ್ನಾಟಕ ಸಂಘದ ಬೆಳ್ಳಿ ಹಬ್ಬ ಆಚರಿಸಲಾಯಿತು. 1986ರಲ್ಲಿ ಕರ್ನಾಟಕ ಸರ್ಕಾರ ₹10 ಲಕ್ಷ ಅನುದಾನ ನೀಡಿ ಸಂಘಕ್ಕೆ ಚೈತನ್ಯ ತುಂಬುವ ಕೆಲಸ ಮಾಡಿದ್ದು, ಗುಜರಾತಿನ ರಿಲಯನ್ಸ್ ಇಂಡಸ್ಟ್ರೀಸ್ ಎಂಡಿ ರಮಣಿಕ್ ಭಾಯಿ ಅಂಬಾನಿ ಅವರಿಂದ ಸೋಹಂ ಸ್ಕ್ವೇರ್ ಚೈತನ್ಯ ನಗರ ಅಹಮದಾಬಾದ್‌ನಲ್ಲಿ ನೂತನ ಕಚೇರಿ ಉದ್ಘಾಟನೆ ಮಾಡಲಾಯಿತು. 2001ರಲ್ಲಿ ಇನ್‌ಫೋಸೀಸ್‌ನ ₹10 ಲಕ್ಷ ದೇಣಿಗೆಯಿಂದ ಸಂಘದ ಕಾರ್ಯಚಟುವಟಿಕೆ ನಡೆದವು. 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಭವನ ನಿರ್ಮಾಣಕ್ಕೆ ಧನಸಹಾಯ ನೀಡಿದ್ದು, 2003ರಲ್ಲಿ ಮೂಲ ಗುಜರಾತಿಗಳ ಸಹಯೋಗದೊಂದಿಗೆ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕನ್ನಡದ ಸೋಗಡನ್ನು ಪಸರಿಸಿದ್ದಾರೆ.
;Resize=(128,128))
;Resize=(128,128))
;Resize=(128,128))