ಸಾರಾಂಶ
ಯೂತ್ ಫಾರ್ ಪರಿವರ್ತನ” ಸಂಸ್ಥೆ 1.6 ಟನ್ ವೇಸ್ಟ್ ಮೆಟೀರಿಯಲ್‌ನಿಂದ 15,000ಕ್ಕೂ ಹೆಚ್ಚು ಪುಸ್ತಕಗಳನ್ನು ತಯಾರಿಸಿ ವಿವಿಧ ಸರ್ಕಾರಿ ಶಾಲೆಗಳಿಗೆ ಹಂಚಲಾಗಿದೆ.
ಧಾರವಾಡ:
ಸಮಾಜದ ಬದಲಾವಣೆಗೆ ಯುವಕರ ಸೇವಾಭಾವವೇ ನಿಜವಾದ ಪ್ರೇರಣೆ ಎನ್ನುವುದಕ್ಕೆ “ಯೂತ್ ಫಾರ್ ಪರಿವರ್ತನ” ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆಯ ಸದಸ್ಯರು ಹಲವು ವರ್ಷಗಳಿಂದ ಖಾಸಗಿ ಶಾಲೆಗಳ ಮಕ್ಕಳು ಅರ್ಧ ಬರೆದು ಬಿಟ್ಟಿರುವ ಹಾಗೂ ರದ್ದಿಯಲ್ಲಿ ದೊರೆಯುವ ಪುಸ್ತಕಗಳ ಉಪಯುಕ್ತ ಪುಟಗಳನ್ನು ಸಂಗ್ರಹಿಸಿ, “ರಿಸೈಕ್ಲೊಥಾನ್” ಯೋಜನೆಯಡಿ ಮರು ನಿರ್ಮಾಣ ಮಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.ಈ ಯೋಜನೆಯಡಿ ಈಗಾಗಲೇ 1.6 ಟನ್ ವೇಸ್ಟ್ ಮೆಟೀರಿಯಲ್‌ನಿಂದ 15,000ಕ್ಕೂ ಹೆಚ್ಚು ಪುಸ್ತಕಗಳನ್ನು ತಯಾರಿಸಿ ವಿವಿಧ ಸರ್ಕಾರಿ ಶಾಲೆಗಳಿಗೆ ಹಂಚಲಾಗಿದೆ. ಇತ್ತೀಚೆಗೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಜನತಾ ಪ್ಲಾಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈ ಪುಸ್ತಕ ವಿತರಿಸಲಾಯಿತು.
ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ವಾಸಂಬಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ಸಂಸ್ಥೆಯ ಸದಸ್ಯ ಚಿದಂಬರ ಶಾಸ್ತ್ರೀ ಮಾತನಾಡಿ, ಖಾಸಗಿ ಶಾಲೆಗಳ ಮಕ್ಕಳು ಅರ್ಧ ಬರೆದು ಎಸೆದ ಪುಸ್ತಕಗಳು ಬಡ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಜೀವ ತುಂಬಬಹುದು ಎಂಬ ಉದ್ದೇಶದಿಂದ ಈ ಕೆಲಸ ಕೈಗೊಂಡಿದ್ದೇವೆ. ಇದು ಪ್ರಚಾರಕ್ಕಾಗಿ ಅಲ್ಲ; ಸೇವೆಯ ನಿಜವಾದ ರೂಪ ಎಂದರು.ಶಿಕ್ಷಕ ಎಲ್.ಐ. ಲಕ್ಕಮ್ಮನವರು ಮಾತನಾಡಿ, ಯೂತ್ ಫಾರ್ ಪರಿವರ್ತನ ಸಂಸ್ಥೆ ಶಾಲೆಗಳಿಗೆ ಬಣ್ಣ ದರ್ಪಣ, ಗಿಡಮರ ನೆಡುವುದು, ಬಸ್ ನಿಲ್ದಾಣ ಮತ್ತು ಕೆರೆ–ಬಾವಿಗಳ ಸ್ವಚ್ಛತಾ ಕಾರ್ಯಗಳಂತಹ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು.
ಈ ವೇಳೆ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.;Resize=(128,128))
;Resize=(128,128))
;Resize=(128,128))