ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ

| Published : Nov 02 2025, 03:45 AM IST

ಸಾರಾಂಶ

ಭಾರತದ ಇತಿಹಾಸಕ್ಕಿಂತ ಕರ್ನಾಟಕದ ಇತಿಹಾಸ ದೊಡ್ಡದಿದ್ದು, ಅರಿತುಕೊಂಡು ಕನ್ನಡ ಉಳಿವಿಗಾಗಿ ನಾವು ಬದುಕು ನಡೆಸಬೇಕು

ಕುಷ್ಟಗಿ: ಅನ್ಯ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡ ಮರೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಇತಿಹಾಸಕ್ಕಿಂತ ಕರ್ನಾಟಕದ ಇತಿಹಾಸ ದೊಡ್ಡದಿದ್ದು, ಅರಿತುಕೊಂಡು ಕನ್ನಡ ಉಳಿವಿಗಾಗಿ ನಾವು ಬದುಕು ನಡೆಸಬೇಕು ಎಂದರು.

ಕನ್ನಡದ ಉಳಿವಿಗಾಗಿ ನಾವು ನಮ್ಮ ಮಕ್ಕಳನ್ನು ಹತ್ತನೇ ತರಗತಿವರೆಗಾದರೂ ಕನ್ನಡ ಶಾಲೆಯಲ್ಲಿ ಕಲಿಸಲು ಮುಂದಾಗಬೇಕು. ಕನ್ನಡದಲ್ಲಿ ಕಲಿತವರು ದೇಶದಲ್ಲಿನ ಉನ್ನತ ಹುದ್ದೆ ಅಲಂಕರಿಸಿರುವ ಉದಾಹರಣೆಗಳು ಸಾಕಷ್ಟಿದ್ದು, ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಅನೇಕ ರಾಜಮನೆತನ, ಕನ್ನಡಪರ ಸಂಘಟನೆ, ಹೋರಾಟಗಾರರು ಕೆಲಸ ಮಾಡಿದ್ದು ಅಂತಹ ಮಹಾನ್ ನಾಯಕರನ್ನು ಸ್ಮರಿಸಬೇಕು ಎಂದರು.

ಸಂತಸ: ರಾಜ್ಯ ಸರ್ಕಾರ ಈ ವರ್ಷ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಹಾಗೂ ತೆಗ್ಗಿಹಾಳ ಗ್ರಾಮದ ಬಸಪ್ಪ ಚೌಡ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್ ವಿ ಡಾಣಿ ಮಾತನಾಡಿ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ಮಾತಿನಂತೆ ನಾವೆಲ್ಲರೂ ಬದ್ಧರಾಗಿ ಕನ್ನಡ ಉಳಿಸೋಣ ಕನ್ನಡ ಬೆಳೆಸೋಣ ಕನ್ನಡಿಗರಾಗಿ ನಾವೆಲ್ಲ ಒಗ್ಗಟ್ಟಿನಿಂದ ಸಾಮರಸ್ಯದಿಂದ ನಾವು ಬದುಕನ್ನು ನಡೆಸೋಣ ಎಂದರು.

ಅದ್ಧೂರಿ ಮೆರವಣಿಗೆ:ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ಪಟ್ಟಣದ ವೀರಯೋಧ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ, ಮಾರುತಿ ವೃತ್ತ, ಬಸವೇಶ್ವರ ವೃತ್ತ, ಕೋಕಿಲಾ ಸರ್ಕಲ್, ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ಮಾರ್ಗದ ಮೂಲಕ ತಾಲೂಕು ಕ್ರೀಡಾಂಗಣದವರೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಅಧಿಕಾರಿಗಳು ಭಾಗಿಯಾಗುವ ಮೂಲಕ ಕೈನಲ್ಲಿ ಧ್ವಜ ಹಿಡಿದುಕೊಂಡು ಘೋಷವಾಕ್ಯಗಳೊಂದಿಗೆ ಹೆಜ್ಜೆ ಹಾಕಿದರು. ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಬಿಇಓ ಉಮಾದೇವಿ ಬಸಾಪುರು, ಸಿಡಿಪಿಓ ಯಲ್ಲಮ್ಮ ಹಂಡಿ, ಪಿಎಸೈ ಹನಮಂತಪ್ಪ ತಳವಾರ, ತಾಪಂ ಇಒ ಪಂಪಾಪತಿ ಹಿರೇಮಠ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ಅಬ್ದುಲ್ ರಜಾಕ್ ಮದಲಗಟ್ಟಿ, ಮಹಾಂತಯ್ಯ ಸೊಪ್ಪಿಮಠ, ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಜಗದೀಶಪ್ಪ ಮೆಣೆದಾಳ, ಉಮೇಶಗೌಡ ಪಾಟೀಲ, ಬಸವರಾಜ ನೆಲಗಣಿ, ಶರಣು ಹುಡೆದ ಸೇರಿದಂತೆ, ಶಾಲಾ ವಿದ್ಯಾರ್ಥಿ, ಇಲಾಖೆಯ ಅಧಿಕಾರಿ ಅನೇಕರು ಇದ್ದರು.

ವಿವಿಧೆಡೆ ಆಚರಣೆ: ಕುಷ್ಟಗಿ ತಾಪಂ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಗೀತಾ ಅಯ್ಯಪ್ಪನವರು, ವ್ಯವಸ್ಥಾಪಕ ಶಾಂತಂವೀರಯ್ಯ ಹಿರೇಮಠ, ಯೋಜನೆ ನಿರ್ದೇಶಕಿ ಸುವರ್ಣ, ತಾಪಂ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಇಲಾಖೆಯ ಅಧಿಕಾರಿಗಳು ಕಾರ್ಯಾಲಯದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕನ್ನಡಪರ ಸಂಘಟನೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸುವ ಮೂಲಕ ಆಚರಣೆ ಮಾಡಿದರು.