ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡಭಾಷೆಯಲ್ಲಿ ಶಿಕ್ಷಣ ಪಡೆಯಬೇಕು-ಶಾಸಕ ಬಸವರಾಜ

| Published : Nov 02 2025, 03:30 AM IST

ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡಭಾಷೆಯಲ್ಲಿ ಶಿಕ್ಷಣ ಪಡೆಯಬೇಕು-ಶಾಸಕ ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಮಾತೃಭಾಷೆ ಕನ್ನಡದ ಕುರಿತು ಸ್ಪಷ್ಟವಾದ ವಿವರಣೆಗಳಿದ್ದರೂ ಅದನ್ನು ತಿರುಚಲಾಗುತ್ತಿದೆ. ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ರಾಜ್ಯಭಾಷೆಯನ್ನಾಗಿ ಪರಿವರ್ತಿಸಿ ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬೇಕು ಹಾಗೂ ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿ ಕಲಿಯುವಂತೆ ಮಾಡಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಮಾತೃಭಾಷೆ ಕನ್ನಡದ ಕುರಿತು ಸ್ಪಷ್ಟವಾದ ವಿವರಣೆಗಳಿದ್ದರೂ ಅದನ್ನು ತಿರುಚಲಾಗುತ್ತಿದೆ. ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ರಾಜ್ಯಭಾಷೆಯನ್ನಾಗಿ ಪರಿವರ್ತಿಸಿ ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬೇಕು ಹಾಗೂ ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿ ಕಲಿಯುವಂತೆ ಮಾಡಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆತಂಕದಲ್ಲಿದೆ ಕನ್ನಡ: ಮಾತೃಭಾಷೆ ಎಂಬುದು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಸಂಕೇತವಾಗಬೇಕು, ಕನ್ನಡ ಇದೊಂದು ಭಾಷೆ ಎನ್ನುವುದಕ್ಕಿಂತ 2 ಸಾವಿರ ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಒಂದು ಸಂಸ್ಕೃತಿ ಆದರೆ ಅಭಿಮಾನ ಶೂನ್ಯತೆ ಹಾಗೂ ಇಚ್ಛಾಶಕ್ತಿ ಕೊರತೆ ಕಾರಣ ಕನ್ನಡ ಭಾಷೆಯ ಮೇಲೆ ಕಾರ್ಮೋಡಗಳು ಆವರಿಸಿದ್ದು, ಕನ್ನಡಿಗರು, ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯ ಈ ಮೂರು ಆತಂಕದಲ್ಲಿದ್ದು ಕನ್ನಡದ ಅಸ್ಮಿತೆ ಉಳಿಸಬೇಕಾಗಿದೆ ಎಂದರು.

ಗತ ವೈಭವ ಮರಳಲಿ: ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿ ಎನ್ನುವುದು ತಪ್ಪೆಂದು ಭಾವಿಸಲಾಗುತ್ತಿದೆ. ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರೂ ಸಹ ಉಂಡ ಮನೆಗೆ ದ್ರೋಹವೆಸಗುತ್ತಿದ್ದಾರೆ. ಭಾಷೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ, ಇದನ್ನೇ ನೆಪವನ್ನಾಗಿ ಮಾಡಿಕೊಂಡು ಇಂಗ್ಲಿಷ್, ಹಿಂದಿ ಭಾಷೆಗಳನ್ನು ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ. ವಾಸವಿದ್ದ ಪ್ರದೇಶದಲ್ಲಿ ಸ್ಥಳೀಯ ಭಾಷೆಯನ್ನು ಕಲಿಯುವಂತೆ ಕಡ್ಡಾಯವಾದ ನಿಯಮಗಳನ್ನು ತರುವ ಮೂಲಕ ನಾವೆಲ್ಲರೂ ಸೇರಿ ಕನ್ನಡ ಭಾಷೆಯ ಹಿಂದಿನ ಗತ ವೈಭವ ಮರಳಿಸಲು ಪ್ರಯತ್ನಿಸೋಣ ಎಂದರು.

ಪಾಲಕರು ಮನಸ್ಥಿತಿ ಬದಲಾಯಿಸಿಕೊಳ್ಳಲಿ: ಕೇವಲ ಇಂಗ್ಲಿಷ್‌ ಕಲಿತವರಷ್ಟೇ ಜಾಣರು ಎಂಬುದು ಸುಳ್ಳು, ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಭರದಲ್ಲಿ ನಮ್ಮ ನೆಲದ ಕನ್ನಡವನ್ನು ಮರೆಯುತ್ತಿದ್ದೇವೆ. ಇಂತಹ ಮನಸ್ಥಿತಿಯಿಂದ ಪಾಲಕರು ಹೊರಬರಬೇಕಾಗಿದ್ದು ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಸಿದರೇ ತಪ್ಪಿಲ್ಲ. ಆದರೆ ಸಂಪೂರ್ಣವಾಗಿ ಕನ್ನಡದ ಜಾಗವನ್ನು ಇಂಗ್ಲಿಷ್ ಆವರಿಸಿಕೊಳ್ಳುತ್ತಿದೆ ಎಂದರು.

ಇದಕ್ಕೂ ಮುನ್ನ ತಹಸೀಲ್ದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಚಂದ್ರಣ್ಣ ಶೆಟ್ಟರ, ಗಾಯತ್ರಿ ರಾಯ್ಕರ್, ಸರೋಜಾ ಉಳ್ಳಾಗಡ್ಡಿ ಕಲಾವತಿ ಬಡಿಗೇರ, ಮಾಜಿ ಸದಸ್ಯರಾದ ಮಂಜುನಾಥ ಭೋವಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.