ಕನ್ನಡಾಂಬೆಯ ಉತ್ಸವ ನಿತ್ಯೋತ್ಸವವಾಗಲಿ

| Published : Nov 02 2025, 03:30 AM IST

ಸಾರಾಂಶ

ಕನ್ನಡಿಗರು ನಾಡು, ನುಡಿ, ಭಾಷೆ ಗೌರವಿಸುವ ಮನೋಇಚ್ಛೆ ಅವರ ಅಂತರಾತ್ಮದಿಂದ ಹೊರ ಹೊಮ್ಮಬೇಕು. ಅಂದಾಗ ಮಾತ್ರ ಕರುನಾಡಿನ ಉದಯಕ್ಕೆ ನಡೆಸಿದ ಹೋರಾಟಕ್ಕೊಂದು ಅರ್ಥ ಬರುತ್ತದೆ.

ಅಳ್ನಾವರ:

ಕನ್ನಡಾಂಬೆಯ ಉತ್ಸವ ನಿತ್ಯೋತ್ಸವವಾಗುವ ಮೂಲಕ ನಾಡಿನ ಹಿರಿಮೆಯನ್ನು ಎತ್ತರಕ್ಕೇರಿಸುವ ಜತೆಗೆ ಕನ್ನಡ ನಾಡು, ನುಡಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಹೇಳಿದರು.

ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲೂಕು ಆಡಳಿತದ ಸಭಾ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಗೀತದಲ್ಲಿ ಕನ್ನಡಿಗರ ಕೊಡುಗೆ ಅಪಾರವಾಗಿದ್ದು ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಸಾಪ ತಾಲೂಕಾಧ್ಯಕ್ಷ ಗುರುರಾಜ ಸಬನೀಸ ಮಾತನಾಡಿ, ಕನ್ನಡಿಗರು ನಾಡು, ನುಡಿ, ಭಾಷೆ ಗೌರವಿಸುವ ಮನೋಇಚ್ಛೆ ಅವರ ಅಂತರಾತ್ಮದಿಂದ ಹೊರ ಹೊಮ್ಮಬೇಕು. ಅಂದಾಗ ಮಾತ್ರ ಕರುನಾಡಿನ ಉದಯಕ್ಕೆ ನಡೆಸಿದ ಹೋರಾಟಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು.

2000 ವರ್ಷ ಇತಿಹಾಸ ಹೊಂದಿರುವ ಕನ್ನಡದ ಕಲಿಕೆಯ ಮಾರ್ಗ ಅತ್ಯಂತ ಸರಳವಾಗಿದೆ. ನಾನಾ ವೈವಿಧ್ಯೆತೆ ಒಳಗೊಂಡಿರುವ ರಾಜ್ಯವು ಸಾಂಸ್ಕೃತಿಕ ರಾಜ ಧಾನಿ ಎನಿಸಿಕೊಂಡಿದೆ. ಇಲ್ಲಿನ ಭಾಷಾ ವೈವಿಧ್ಯೆತೆ ಎಲ್ಲರಿಗೂ ಮಾದರಿಯಾಗಿದೆ ಎಂದ ಅವರು, ಎಲ್ಲರನ್ನು ನಮ್ಮವರೆಂದು ಅಪ್ಪಿಕೊಳ್ಳುವ ಮನೋಭಾವನೆ ಹೊಂದಿರುವ ಕನ್ನಡಿಗರು ತ್ಯಾಗ ಮತ್ತು ಹೋರಾಟದ ಗಟ್ಟಿ ಮನಸ್ಸುಳ್ಳವರಾಗಿದ್ದಾರೆ. ಅನೇಕರ ಹೋರಾಟದ ಫಲವಾಗಿ ರಚನೆಯಾಗಿರುವ ಕರ್ನಾಟಕ ರಾಜ್ಯ ಸಂಪದ್ಭರಿತವಾದ ನಾಡಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮೋಲ ಗುಂಜೀಕರ ಮಾತನಾಡಿ, ಕಲೆ ಮತ್ತು ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಅಪಾರವಾಗಿದೆ. ಕನ್ನಡಿಗರು ತಮ್ಮ ಭಾಷೆಯಷ್ಟೆ ಅಲ್ಲದೆ ವಿವಿಧ ಭಾಷೆಗಳಲ್ಲಿಯೂ ಪ್ರಭುತ್ವ ಸಾಧಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಕನ್ನಡದ ನೆಲ, ಜಲದ ರಕ್ಷಣೆಯ ಮನೋಭಾವನೆ ಗಟ್ಟಿಗೊಳ್ಳಬೇಕಾಗಿದೆ. ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಕರೆ ನೀಡಿದರು.

ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆಗೆ ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಹಾಗೂ ಪಪಂ ಅಧ್ಯಕ್ಷ ಅಮೋಲ ಗುಂಜೀಕರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಚಾಲನೆ ನೀಡಿದರು. ಭಾವಚಿತ್ರವನ್ನು ಸಿಂಗರಿಸಿದ ವಾಹನದಲ್ಲಿಟ್ಟು ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯನ್ನು ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳನ್ನು ಮತ್ತು ಪತ್ರಕರ್ತರನ್ನು ತಾಲೂಕು ಆಡಳಿತ ಮತ್ತು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ತಹಸೀಲ್ದಾರ್‌ ಧ್ವಜಾರೋಹಣ ನೇರವೇರಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಪ್ರಶಾಂತ ತುರಕಾಣಿ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಪಪಂ ಉಪಾಧ್ಯಕ್ಷ ಛಗನಲಾಲ ಪಟೇಲ, ಸದಸ್ಯರಾದ ತಮೀಮ ತೇರಗಾಂವ, ನದೀಮ ಕಂಟ್ರಾಕ್ಟರ್‌, ರಮೇಶ ಕುನ್ನೂರಕರ, ಯಲ್ಲಾರಿ ಹುಬ್ಬಳ್ಳಿಕರ, ನೇತ್ರಾವತಿ ಕಡಕೋಳ, ಭಾಗ್ಯವತಿ ಕುರುಬರ, ಶಾಲೆಟ್ ಬರೆಟ್ಟೋ, ರಶ್ಮಿ ತೇಗೂರ, ಹಸನಅಲಿ ಶೇಖ, ಸುರೇಂದ್ರ ಕಡಕೋಳ, ಮಂಜುಳಾ ಅಂಬಡಗಟ್ಟಿ, ಪ್ರವೀಣ ಪವಾರ, ಜಯಶ್ರೀ ಉಡುಪಿ, ಪೂರ್ಣಿಮಾ ಮುತ್ನಾಳ ಸೇರಿದಂತೆ ಇತರರು ಇದ್ದರು.