ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಚಿವ ವೈದ್ಯ ವಿರೋಧ

| Published : Nov 02 2025, 03:30 AM IST

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಚಿವ ವೈದ್ಯ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಯೋಜನೆಗೆ ತಮ್ಮ ವಿರೋಧ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಕಾರವಾರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಯೋಜನೆಗೆ ತಮ್ಮ ವಿರೋಧ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತರುವಾಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ಲಿಯರೆನ್ಸ್ ನೀಡಿವೆ. ನಮ್ಮ ಸರ್ಕಾರ ಬರುವ ಮೊದಲೇ ಯೋಜನೆಯ ಪ್ರಕ್ರಿಯೆಗಳು ಮುಗಿದು, ಟೆಂಡರ್ ಆಗಿದ್ದು ಕೆಲಸ ಮಾತ್ರ ಬಾಕಿ ಇದೆ. ಆದರೂ ನಮ್ಮ ಜನತೆಗಾಗಿ ಮತ್ತು ಜಿಲ್ಲೆಗಾಗಿ ನಾನು ಈಗಲೂ ಯೋಜನೆಯನ್ನು ವಿರೋಧಿಸುತ್ತೇನೆ ಎಂದು ಸಚಿವರು ಹೇಳಿದರು.

ಮೇ ತಿಂಗಳಲ್ಲಿ ಆರಂಭವಾದ ಮಳೆ ಆರು ತಿಂಗಳಾದರೂ ನಿಲ್ಲದಿರುವುದರಿಂದ ರಸ್ತೆ ಕಾಮಗಾರಿಗೆ ಹಿನ್ನಡೆ ಆಗುತ್ತಿದೆ. ಆದರೆ ಜನರ ಹಿತಕ್ಕಾಗಿ ರಸ್ತೆ ದುರಸ್ತಿ ಕಾರ್ಯಗಳು ನಡೆಯುತ್ತಲೇ ಇವೆ ಎಂದು ಮಂಕಾಳ ವೈದ್ಯ ಹೇಳಿದರು. ಸತತ 6-7 ತಿಂಗಳು ಮಳೆ ಬಂದರೆ ಕೆಲಸ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಮಳೆ ಅಡ್ಡಿಯಾಗದೇ ಇದ್ದಿದ್ದರೆ ಈ ವೇಳೆಗೆ ಎಲ್ಲ ರಸ್ತೆಗಳನ್ನು ಮಾಡಿ ಮುಗಿಸಲಾಗುತ್ತಿತ್ತು ಎಂದರು.

ಜಿಲ್ಲೆಯಲ್ಲಿ ₹1000 ಕೋಟಿ ನೀರು ಪೂರೈಕೆ ಯೋಜನೆಯನ್ನು ತರಲಾಗಿದ್ದು, ಎಲ್ಲಿ ತೊಂದರೆ ಆಗುತ್ತದೆಯೋ ಅಲ್ಲಿ ಬೇಕಾದಷ್ಟು ಹಣ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಮರಳು ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹಸಿರು ಪೀಠದಲ್ಲಿ ವಿಚಾರಣೆ ಇತ್ತು. ಆದರೆ, ದಾಖಲೆ ಸಲ್ಲಿಸಬೇಕಿದ್ದ ಕಾರಣ ಅದನ್ನು ನ. 8ಕ್ಕೆ ಮುಂದೂಡಲಾಗಿದೆ. ಮರಳು ಪೂರೈಕೆ ನಿಂತಿದ್ದರಿಂದ ನಮ್ಮ ಸರ್ಕಾರಿ ಕಟ್ಟಡ ಕಾಮಗಾರಿಗಳೇ ಸ್ಥಗಿತಗೊಂಡಿವೆ. ಕಾನೂನುಬದ್ಧವಾಗಿ ಮರಳು ಸಾಗಾಟ ನಡೆಯುವ ಅವಶ್ಯಕತೆ ಇದ್ದು, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ ಮತ್ತು ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ ಎಂದರು.

ಹಿಂದಿನ ಸರ್ಕಾರ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಹೀಗಾಗಿ, ಬಸ್ ಸಂಚಾರದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಈಗ ನಾವು ಹಳೆಯ ಬಸ್‌ಗಳನ್ನು ದುರಸ್ತಿ ಮಾಡಸಿ, ಹೊಸ ಬಸ್ ಖರೀದಿಸುತ್ತಿದ್ದೇವೆ. ಜಿಲ್ಲೆಗೆ ಈಗ ಮತ್ತೆ 100 ಬಸ್ ನೀಡಲಾಗುತ್ತಿದ್ದು, ಕೋವಿಡ್ ಕಾರಣ ನೀಡಿ ಬಂದ್ ಆಗಿರುವ ಹಳ್ಳಿಗಳ ಬಸ್ ಸೇವೆ ಮತ್ತೆ ಆರಂಭಿಸಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರವಾಸಕ್ಕಾಗಿ ಒಳ್ಳೆಯ ಬಸ್‌ಗಳನ್ನೇ ನೀಡಲಾಗುವುದು ಎಂದರು. ಖಾಸಗಿ ಬಸ್‌ಗಳಲ್ಲೇ ಜನತೆ ಹೆಚ್ಚು ಓಡಾಟ ನಡೆಸುವುದರಿಂದ ಸರ್ಕಾರದ ವೋಲ್ವೋ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ನಾವೆಲ್ಲ ಕಾರಣ ಎಂದು ತಿಳಿಸಿದರು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಇದ್ದರು.ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಸಚಿವ ಮಂಕಾಳ ವೈದ್ಯ

ಕಾರವಾರ: ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ಏನೇ ಬದಲಾವಣೆ ಇದ್ದರೂ ನಮ್ಮ ಕುಟುಂಬದ ಮುಖ್ಯಸ್ಥರು (ಹೈಕಮಾಂಡ್) ನಿರ್ಧರಿಸುತ್ತಾರೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತರುವಾಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನವೆಂಬರ್ ಕ್ರಾಂತಿಯ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಏನೇ ಇದ್ದರೂ ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ. ಕಾಂಗ್ರೆಸ್ ಕುಟುಂಬ ಸದೃಢ ಆಗಿದಕ್ಕೆ ಇಂದು ರಾಜ್ಯದಲ್ಲಿ ಸರ್ಕಾರ ಇದೆ ಎಂದು ಅವರು ತಿಳಿಸಿದರು.

ಪಕ್ಷಕ್ಕಾಗಿ, ರಾಜ್ಯಕ್ಕಾಗಿ ಎಲ್ಲರೂ ಒಂದಿಲ್ಲ ಒಂದು ತ್ಯಾಗ ಮಾಡಲೇಬೇಕು. ನಾನೂ ತ್ಯಾಗ ಮಾಡಬೇಕು, ಮತ್ತೊಬ್ಬರೂ ತ್ಯಾಗ ಮಾಡಬೇಕಾಗಿದೆ ಎಂದು ಹೇಳಿದರು.

20 ವರ್ಷದ ಹಿಂದೆ ₹5 ಲಕ್ಷದಲ್ಲಿ ಒಂದು ಕಿಮೀ ರಸ್ತೆ ಆಗುತ್ತಿತ್ತು. ಇಂದು ಇಂದು ಒಂದು ಕಿ.ಮೀ ರಸ್ತೆಗೆ ಒಂದು ಕೋಟಿ ಬೇಕಾಗಿದೆ. ಹಂತ ಹಂತವಾಗಿ ರಸ್ತೆಗಳ ಸಮಸ್ಯೆ ನೀಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.