ಸಾರಾಂಶ
ಸವಣೂರು: ನಮ್ಮ ಹಿರಿಯರು ಕಂಡಂತಹ ಅಖಂಡ ಕರ್ನಾಟಕ ನಿರ್ಮಾಣದ ಕನಸು ಎಲ್ಲ ಕನ್ನಡ ಪರ ಹೋರಾಟಗಾರರ ಕಠಿಣ ಪರಿಶ್ರಮದ ಹೋರಾಟದ ಫಲದಿಂದಾಗಿ 1956ರಲ್ಲಿ ಕನ್ನಡ ಭಾಷಾ ಪ್ರದೇಶಗಳು ಒಟ್ಟುಗೂಡುವ ಮೂಲಕ ನನಸಾಗಿದೆ ಎಂದು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.ಕನ್ನಡ ನಮ್ಮ ಗೌರವ, ನಮ್ಮ ಗುರುತು. ಕನ್ನಡದ ಕವಿಗಳಾದ ಡಾ. ವಿ.ಕೃ. ಗೋಕಾಕ, ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ ಅನೇಕ ಕನ್ನಡದ ಕವಿಗಳ ಕೃತಿಗಳು ಕನ್ನಡದ ಸೌಂದರ್ಯವನ್ನು ಲೋಕಕ್ಕೆ ತೋರಿಸಿವೆ. ಎಲ್ಲ ರಂಗಗಳಲ್ಲಿ ಕರ್ನಾಟಕವು ಇತರೆ ರಾಜ್ಯಗಳಿಗಿಂತಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಉದ್ಯೋಗ, ಕೃಷಿ, ಸಂಸ್ಕೃತಿ, ಕ್ರೀಡೆಗಳಲ್ಲಿ ನಾವೇ ಉತ್ತಮ ಸಾಧನೆ ತೋರುತ್ತಿರುವುದಕ್ಕೆ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದವೇ ಕಾರಣ. ಕನ್ನಡ ನಾಡು ಸರ್ವ ಜನಾಂಗದ ಶಾಂತಿ ತೋಟವಾಗಿ ನಿರ್ಮಾಣಗೊಂಡಿದ್ದು, ಕನ್ನಡ ಧ್ವಜದ ಬಣ್ಣದಲ್ಲಿಯೂ ಸಹ ಅರಿಶಿಣ, ಕುಂಕುಮದ ಪ್ರತಿಬಿಂಬ ಅಡಗಿದೆ. ಪ್ರಪಂಚದಾದ್ಯಂತ ಇರುವ ಕನ್ನಡಿಗರು ಒಗ್ಗೂಡಿಕೊಂಡು ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ತಾಯಿ ಭುವನೇಶ್ವರಿ ದೇವಿ ಸ್ತಬ್ಧಚಿತ್ರ, ಕನ್ನಡಕ್ಕಾಗಿ ಹೋರಾಟ ಮಾಡಿದ ಮಹನೀಯರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳ ಮೆರವಣಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ನಗರದಾದ್ಯಂತ ಸಂಚರಿಸಿ ತಾಲೂಕು ಕ್ರೀಡಾಂಗಣಕ್ಕೆ ತಲುಪಿತು. ನಂತರ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಮೂಹಿಕ ಕವಾಯತ್, ಕನ್ನಡದ ಭಾಷಾ ಪ್ರೇಮವನ್ನು ಹೆಚ್ಚಿಸುವ ಹಾಡುಗಳಿಗೆ ನೃತ್ಯ ಪ್ರದರ್ಶನ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್ ರವಿಕುಮಾರ ಕೊರವರ ಅಧ್ಯಕ್ಷತೆ ವಹಿಸಿದ್ದರು.ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಬಸವರಾಜ ಹೊಸಮನಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಮುಲ್ಲಾ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಹರೀಶಗೌಡ ಪಾಟೀಲ, ಪರಶುರಾಮ ಈಳಗೇರ, ರವಿ ಕರಿಗಾರ, ಗುರುಮಹಾಂತಯ್ಯ ಆರಾಧ್ಯಮಠ ಹಾಗೂ ಇತರರು ಪಾಲ್ಗೊಂಡಿದ್ದರು. ಬಿಇಒ ಎಂ.ಎಫ್.ಬಾರ್ಕಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))