ಸಾರಾಂಶ
ಲಕ್ಷ್ಮೇಶ್ವರ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಜಗತ್ತಿನ ಪ್ರಸಿದ್ಧ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇದೆ. ಅನ್ಯ ಭಾಷೆಗಳಿಂದ ಎಷ್ಟೇ ದಾಳಿ ನಡೆದರೂ ಕನ್ನಡ ಅಳಿಸಲು ಸಾಧ್ಯ ಇಲ್ಲ ಎಂದು ಹಿರಿಯ ಸಾಹಿತಿ ಎಂ.ಎಸ್. ಪೂಜಾರ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರಲ್ಲಿ ಭಾನುವಾರ ತಾಲೂಕು ಸರ್ಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಆಶ್ರಯದಲ್ಲಿ ತಾಲೂಕಿನ ಬಾಲೆಹೊಸೂರು ಗ್ರಾಮದ ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಎಸ್.ಜಿ. ಮಾದಾಪುರಮಠ ರಚಿಸಿದ ಬೆಳ್ಳಕ್ಕಿ, ಹರ್ಷಋತು, ತೋಚಿದ್ದು-ಗೀಚಿದ್ದು ಕವನ ಸಂಕಲನಗಳ ಬಿಡುಗಡೆ ಸಮಾರಂಭ ಉದ್ಧೇಶಿಸಿ ಮಾತನಾಡಿದರು.ಕನ್ನಡಕ್ಕೆ ಎಷ್ಟೆ ಕುತ್ತು ಬಂದರೂ ಅದು ಉಳಿದುಕೊಳ್ಳುವ ಶಕ್ತಿ ಹೊಂದಿದೆ.ಆದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಮಾತೃ ಭಾಷೆ ಪ್ರೀತಿಸಬೇಕು. ಅಲ್ಲದೆ ಮಕ್ಕಳಿಗೆ ಪ್ರೀತಿ, ಅಭಿಮಾನದಿಂದ ಕನ್ನಡ ಕಲಿಸಬೇಕು. ಕೇವಲ ಸಮ್ಮೇಳನ ಮಾಡುವುದರಿಂದ ಕನ್ನಡ ಬೆಳೆಯಲಾರದು. ಭಾಷೆ ಉಳಿಸಬೇಕು ಎಂಬ ಭಾವನೆ ಕನ್ನಡಿಗರಲ್ಲಿ ಮೂಡಿಸುವ ಕೆಲಸ ಕನ್ನಡ ಪರ ಸಂಘಟನೆಗಳು ಮಾಡಲಿ. ಎಸ್.ಜಿ.ಮಾದಾಪುರಮಠ ಓರ್ವ ಉತ್ತಮ ಸಾಹಿತಿ. ಒಮ್ಮೆಲೇ ಮೂರು ಕವನ ಸಂಕಲನ ಪ್ರಕಟಿಸುವುದು ಸಾಹಸದ ಕೆಲಸ. ಎಲ್ಲ ಕನ್ನಡಿಗರು ಅವರ ಸಂಕಲನ ಕೊಂಡು ಓದಬೇಕು ಎಂದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಆರ್.ಎನ್. ಪಂಚಭಾವಿ ಮಾತನಾಡಿ, ಎಲ್ಲರೂ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಕಥೆ, ಕವನ ಬರೆಯುವುದು ಒಂದು ಸೃಜನಶೀಲ ಹವ್ಯಾಸವಾಗಿದೆ. ಕನ್ನಡ ಕಟ್ಟುವ ಮತ್ತು ಬೆಳೆಸುವ ಕೆಲಸ ಕನ್ನಡ ಶಾಲೆಗಳ ಶಿಕ್ಷಕರು ಮಾಡಬೇಕು. ಬದುಕಿನಲ್ಲಿ ಕಂಡುಂಡ ಸತ್ಯಗಳನ್ನು ಮಾದಾಪುರಮಠ ಅವರು ತಮ್ಮ ಕವಿತೆಗಳಲ್ಲಿ ಬಿಂಬಿಸಿದ್ದು ಎಲ್ಲರು ಅವುಗಳನ್ನು ಓದಬೇಕು ಎಂದರು.ಈ ವೇಳೆ ಹಿರಿಯ ಸಾಹಿತಿ ಎಂ.ಎಸ್. ಪೂಜಾರ ಅವರು ಬೆಳ್ಳಕ್ಕಿ, ಸಿ.ಜಿ.ಹಿರೇಮಠ ಅವರು ಹರ್ಷಋತು ಹಾಗೂ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಅವರು ತೋಚಿದ್ದು-ಗೀಚಿದ್ದು ಕವನ ಸಂಕಲನ ಬಿಡುಗಡೆ ಮಾಡಿದರು.
ಮಕ್ಕಳ ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ, ವೀರಯ್ಯ ಹಿರೇಮಠ, ಜೆ.ಎಸ್.ರಾಮಶೆಟ್ರ ಮಾತನಾಡಿದರು.ಸರ್ಕಾರಿ ನಿವೃತ್ತ ಅಸೋಸಿಯೇಶನ್‌ನ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಈಳಗೇರ, ಎನ್.ಆರ್. ಸಾತಪುತೆ, ಉಮೇಶ ನೇಕಾರ, ಆರ್.ಎಚ್. ಕಾಳೆ, ಬಾಗೇವಾಡಿ, ಎಂ.ಕೆ. ಕಳ್ಳಿಮನಿ, ಬಸವರಾಜ ಯತ್ನಳ್ಳಿ, ಬಿ.ಎನ್. ರಾಟಿ ಇದ್ದರು. ಬಿ.ಎಂ. ಕುಂಬಾರ ನಿರೂಪಿಸಿದರು. ಎಸ್.ವಿ. ಅಂಗಡಿ ಸ್ವಾಗತಿಸಿ ವಂದಿಸಿದರು.