ಸಾರಾಂಶ
ಬೆಂಗಳೂರು : ಹಸಿರು ಮಾರ್ಗದ ವಿಸ್ತರಿತ ಮಾದಾವರ ಮತ್ತು ನಾಗಸಂದ್ರ ನಡುವೆ ರೈಲು ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಸಿದ್ಧತೆ ಮಾಡಿಕೊಂಡಿದೆ. ಅ.3 ಮತ್ತು 4ರಂದು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. 3.7 ಕಿ.ಮೀ. ಅಂತರದ ಈ ಮಾರ್ಗದಲ್ಲಿ ಚಿಕ್ಕಬಿದರಕಲ್ಲು, ಮಂಜುನಾಥ ನಗರ ಹಾಗೂ ಮಾದಾವರ ನಿಲ್ದಾಣಗಳು ಇವೆ.
ಸಿಎಂಆರ್‌ಎಸ್ ಮಾರ್ಗಸೂಚಿ ಅನುಸಾರ ನಡೆದ ಬಳಿಕ ಅಧಿಕಾರಿಗಳು ಸೂಚಿಸುವ ಕೆಲ ಬದಲಾವಣೆಗಳನ್ನು ಸೂಚಿಸುವ ನಿರೀಕ್ಷೆಯಿದೆ. ಅದನ್ನು ಅಳವಡಿಸಿಕೊಂಡು ಸುಮಾರು ಒಂದೆರಡು ವಾರದಲ್ಲಿ ಅಂದರೆ ಬಹುತೇಕ ಅಕ್ಟೋಬರ್ 2ನೇ ವಾರಕ್ಕೆ ವಿಸ್ತರಿತ ಮಾರ್ಗದಲ್ಲಿ ಜನಸಂಚಾರ ಪ್ರಾರಂಭವಾಗಬಹುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಜನಸಂಚಾರ ಪ್ರಾರಂಭ ಆದಲ್ಲಿ ನೆಲಮಂಗಲ, ಮಾಕಳಿ, ಮಾದನಾಯಕನಹಳ್ಳಿ ಸೇರಿ ಸುತ್ತಲಿನ ಜನತೆಗೆ ಅನುಕೂಲ ಆಗಲಿದೆ. ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 20ರಿಂದ 30 ಸಾವಿರ ಹೆಚ್ಚಾಗಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.
ವೈಟ್‌ಫೀಲ್ಡ್‌ನಲ್ಲಿ ರೈಲು ವ್ಯತ್ಯಯ: ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಉಂಟಾಗಿ ಭಾನುವಾರ ಬೆಳಗ್ಗೆ ಅರ್ಧ ಗಂಟೆಗೂ ಹೆಚ್ಚು ಕಾಲ ರೈಲು ಸೇವೆ ಸ್ಥಗಿತಗೊಂಡು ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.
ಬೆಳಗ್ಗೆ 8.25 ರಿಂದ 8.55ರವರೆಗೆ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಐಟಿಪಿಎಲ್ ನಡುವೆ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ಚಲ್ಲಘಟ್ಟದಿಂದ ಐಟಿಪಿಎಲ್ ಮಾರ್ಗಗಳ ನಡುವೆ ರೈಲು ಸಂಚಾರ ನಡೆಯಿತು. ಬೆಳಗ್ಗೆ 8.55ರ ಬಳಿಕ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರವನ್ನು ಮತ್ತೆ ಆರಂಭಿಸಲಾಯಿತು. ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.