ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆ, ಕಲಿಯುವ ಕಸುವು ಇದೆ. ಇದನ್ನು ಎಕ್ಕಿ ತೆಗೆಯುವ ಕೆಲಸ ಮೊದಲು ಆಗಬೇಕಿದೆ. ನಾಡಗೀತೆ, ಸುಗಮ ಸಂಗೀತಕ್ಕೆ ನೂರು ವರ್ಷ ತುಂಬಿದೆ. ಈ ಸವಿನೆನಪಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಗೊಳಿಸಲು ವಿನೂತನ ಅಭಿಯಾನ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕನ್ನಡ ಭಾಷೆಯೇ ಸುಂದರ ಸಂಗೀತದ ಲಿಪಿಯನ್ನು ಹೊಂದಿದೆ. ಕಲಿಯುವ, ಕಲಿಸುವ ಪರಿಚಾರಕೆಯರ ಅರ್ಪಣೆ ಮನೋಭಾವ ಅವಶ್ಯವಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಹೋಬಳಿಯ ಮಾದಾಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಕಲಾಸಂಘ ಸಹಯೋಗದಲ್ಲಿ ನಡೆದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಂಭ್ರಮದಲ್ಲಿ ಮಕ್ಕಳೊಂದಿಗೆ ನಾಡಗೀತೆ, ಸುಗಮ ಸಂಗೀತ ಗೀತೆಗಳನ್ನು ಹಾಡುತ್ತ ಮಾತನಾಡಿದರು.

ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆ, ಕಲಿಯುವ ಕಸುವು ಇದೆ. ಇದನ್ನು ಎಕ್ಕಿ ತೆಗೆಯುವ ಕೆಲಸ ಮೊದಲು ಆಗಬೇಕಿದೆ. ನಾಡಗೀತೆ, ಸುಗಮ ಸಂಗೀತಕ್ಕೆ ನೂರು ವರ್ಷ ತುಂಬಿದೆ. ಈ ಸವಿನೆನಪಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಗೊಳಿಸಲು ವಿನೂತನ ಅಭಿಯಾನ ಆರಂಭಿಸಲಾಗಿದೆ ಎಂದರು.

ಮಕ್ಕಳಲ್ಲಿ ಕನ್ನಡತನ, ಭಾಷೆ ವಿಸ್ತಾರತೆ ಅರಿತರೆ ಮಾತ್ರ ಕನ್ನಡ ಶಾಲೆ, ಸರ್ಕಾರಿ ಶಾಲೆ ಉಳಿಯಲಿದೆ. ನಾಡಗೀತೆ, ಕನ್ನಡ ಗೀತೆಗಳನ್ನು ರಾಗ, ಸ್ಪಷ್ಟ ಉಚ್ಛಾರಣೆಯೊಂದಿಗೆ ಮಕ್ಕಳು ಹಾಡಲು ರಾಜ್ಯಾದ್ಯಂತ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ಮಕ್ಕಳು ಸಾಮೂಹಿಕವಾಗಿ ಏಕಕಂಠದಲ್ಲಿ ಹಲವು ಗೀತೆಗಳನ್ನು ತರಬೇತಿ ನೀಡಿ ಹಾಡಿಸಿ ಕನ್ನಡಮ್ಮನಿಗೆ ಗೀತಗಾಯನ ಸೇವೆ ಅರ್ಪಿಸಿದರು. ವಿವಿಧ ಶಾಲೆ ಮುಖ್ಯಶಿಕ್ಷಕರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ವನೌಷಧಿ ಗಿಡಗಳನ್ನು ವಿತರಿಸಲಾಯಿತು.

ಈ ವೇಳೆ ಸಂಚಾಲಕ ಎಂ.ಎನ್. ಸುಬ್ರಹ್ಮಣ್ಯ, ವಕೀಲ ಎಂ.ಆರ್.ರಾಜೇಶ್, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕಲಾವಿದಅಭಿಷೇಕ್, ಪ್ರಾಂಶುಪಾಲೆ ಶಾಂತಿ, ಮುಖ್ಯ ಶಿಕ್ಷಕರಾದ ದೇವರಾಜು, ಜ್ಯೋತಿ, ಶಿಕ್ಷಕರಾದ ಪ್ರಕಾಶ್, ರಾಘವೇಂದ್ರ, ಜಗದೀಶ್, ಮಂಗಳಾ, ಲೀಲಾವತಿ, ಸೌಮ್ಯ, ವೀಣಾ, ಜಯಲಕ್ಷ್ಮೀ, ಪಲ್ಲವಿ, ಭೂಮಿಕಾ ಇದ್ದರು.

ದಿ.ಎಸ್.ಎಂ.ಕೃಷ್ಣರ ಪ್ರಥಮ ವರ್ಷದ ಪುಣ್ಯಸ್ಮರಣೆ ಆಚರಣೆ

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಚನ್ನೇಗೌಡ ವಿದ್ಯಾ ಸಂಸ್ಥೆಯಿಂದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ಬುಧವಾರ ಆಚರಿಸಲಾಯಿತು.

ತಾಲೂಕಿನ ಸೋಮನಹಳ್ಳಿ ಹೊರವಲಯದ ಕಾಫಿ ಡೇ ಆವರಣದಲ್ಲಿ ದಿ.ಎಸ್.ಎಂ.ಕೃಷ್ಣರ ಸಮಾಧಿಗೆ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹಾಗೂ ಶಿಕ್ಷಕ ವೃಂದದವರು ಸಮಾಧಿಗೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆಯೊಂದಿಗೆ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಪೂರ್ವ ಚಂದ್ರ, ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಕೃಷ್ಣ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದರೂ ಸಹ ಅವರ ನೆನಪು ಕ್ಷೇತ್ರದ ಜನತೆಯಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದರು.

ಈ ವೇಳೆ ಚನ್ನೇಗೌಡ ವಿದ್ಯಾಸಂಸ್ಥೆ ಯು.ಎಸ್.ರವಿ, ಕೆ.ಎನ್.ವರದರಾಜು, ಕೃಷ್ಣ. ಎಂ.ಟಿ.ಚಂದ್ರಶೇಖರ್, ಎಚ್.ಬಿ.ಮಹೇಶ್, ಡಾ.ಎಸ್.ಪಿ.ಕಿರಣ್, ಜಿ.ಸುರೇಂದ್ರ, ಸತ್ಯ ಪ್ರೇಮ, ಚೇತನ ಮತ್ತಿತರರು ಭಾಗವಹಿಸಿದ್ದರು.