ಪಾಂಡವಪುರದಿಂದ ಕೆ.ಬೆಟ್ಟಹಳ್ಳಿಗೆ ತೆರಳುವ ಮಾರ್ಗದ ಶಂಭೂನಹಳ್ಳಿ ಬಳಿ ರಸ್ತೆ ಮಧ್ಯ ಇರುವ ಸೇತುವೆ ಕುಸಿದು ಬಿದ್ದು ತಿಂಗಳಾದರೂ ಯಾವೊಬ್ಬ ಅಧಿಕಾರಿಗಳು ಸೇತುವೆ ದುರಸ್ತಿಗೆ ಕ್ರಮ ವಹಿಸದೇ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಿ.ಎಸ್.ಜಯರಾಂ

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರದಿಂದ ಕೆ.ಬೆಟ್ಟಹಳ್ಳಿಗೆ ತೆರಳುವ ಮಾರ್ಗದ ಶಂಭೂನಹಳ್ಳಿ ಬಳಿ ರಸ್ತೆ ಮಧ್ಯ ಇರುವ ಸೇತುವೆ ಕುಸಿದು ಬಿದ್ದು ತಿಂಗಳಾದರೂ ಯಾವೊಬ್ಬ ಅಧಿಕಾರಿಗಳು ಸೇತುವೆ ದುರಸ್ತಿಗೆ ಕ್ರಮ ವಹಿಸದೇ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಶಂಭೂನಹಳ್ಳಿ ಗ್ರಾಮದ ಬಳಿ ರಸ್ತೆಯ ಸೇತುವೆ ಕುಸಿದು ಬಿದ್ದು ಎರಡು ತಿಂಗಳಾಗಿದೆ. ಸೇತುವೆ ಕುಸಿದಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಸಣ್ಣ ಹಗ್ಗ ಹಾಗೂ ಬ್ಯಾರಿಕೇಡ್ ಹಾಕಲಾಗಿದೆ. ಆದರೆ, ಅಧಿಕಾರಿ‌ ವರ್ಗವಾಗಲಿ ಅಥವಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಾಗಲಿ ಸೇತುವೆ ದುರಸ್ತಿಗೊಳಿಸಿ ವಾಹನಗಳು, ಜನರ ಸುಗಮ ಸಂಚಾರಕ್ಕೆ ಕ್ರಮ ವಹಿಸಿಲ್ಲ.

ಪಾಂಡವಪುರ- ಕೆ.ಬೆಟ್ಟಹಳ್ಳಿ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನ ಸವಾರರು ಪ್ರಯಾಣ ಬೆಳೆಸುತ್ತಾರೆ. ಜತೆಗೆ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಇದೇ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಅಲ್ಲದೇ ಭೂ ವರಹನಾಥ ದೇವಸ್ಥಾನಕ್ಕೂ ಜನರು ಇದೇ ರಸ್ತೆ ಮೂಲಕವೇ ಸಾಗಬೇಕು. ರಸ್ತೆಯ ಸೇತುವೆ ಕುಸಿದು ಬಿದ್ದು ಎರಡು ತಿಂಗಳಾದರೂ ಅಧಿಕಾರಿ ವರ್ಗ ಸೇತುವೆ ದುರಸ್ತಿಗೊಳಿಸದೇ ಇರುವುದು ಜನರ ಶಾಪಕ್ಕೆ ಗುರಿಯಾಗಿದ್ದಾರೆ.

ಮೊದಲೇ ಈ ರಸ್ತೆ ತಿರುವಿನಿಂದ ಕೂಡಿದೆ. ರಸ್ತೆ ಸೇತುವೆ ಕುಸಿದಿರುವುದು ವಾಹನ ಸವಾರರ ಸುಗಮ ಸಂಚಾರಕ್ಕೂ ಬಹಳ ತೊಂದರೆಯಾಗಿದೆ. ಸೇತುವೆ ದುರಸ್ತಿಗೊಳಿಸದ ಪರಿಣಾಮ ದ್ವಿಚಕ್ರ, ತ್ರಿ‌ಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರು ಸ್ವಲ್ಪ ಮೈಮರೆತರೂ ಹಳ್ಳಕ್ಕೆ ಬೀಳುವುದಂತೂ ಗ್ಯಾರಂಟಿ. ಹೀಗಾಗಿ ವಾಹನ ಸವಾರರು ಜೀವವನ್ನು ಕೈಯಲ್ಲಿಡಿದು ಅಧಿಕಾರಿಗಳನ್ನು ಶಪಿಸುತ್ತಲೇ ದಿನಿನಿತ್ಯ ಪ್ರಯಾಣಿಸುತ್ತಿದ್ದಾರೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಆದಷ್ಟು ಬೇಗ ಸೇತುವೆ ದುರಸ್ತಿಗೊಳಿಸುವ ಮೂಲಕ ವಾಹನ ಸವಾರರಿಗೆ ಸುಗಮ ಸಂಚಾರ ಮಾಡಲು ಅನುಕೂಲ ಕಲ್ಪಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.ಶಂಭೂನಹಳ್ಳಿ ಸೇತುವೆ ದುರಸ್ತಿ ಕಾರ್ಯವನ್ನು ಒಂದು ವಾರದೊಳಗಾಗಿ ಕೈಗೆತ್ತಿಕೊಳ್ಳಲಾಗುವುದು. ತುರ್ತು ಕಾಮಗಾರಿದಡಿ ಅನುದಾನಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರ ಕಾಮಗಾರಿ ನಡೆಸಲಾಗುವುದು.

- ದರ್ಶನ್ ಪುಟ್ಟಣ್ಣಯ್ಯ ಶಾಸಕರುಪಾಂಡವಪುರ ಕೆ.ಬೆಟ್ಟಹಳ್ಳಿ, ಶಂಭೂನಹಳ್ಳಿ ರಸ್ತೆಯಲ್ಲಿ ಕುಸಿದಿರುವ ಸೇತುವೆಯ ಗೋಡೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕಾಗಿ ಸರ್ಕಾರಕ್ಕೆ ಅನುಮೋದನೆಗೆ ಕಳಿಸಿದ್ದು, ಶೀಘ್ರ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಇಲ್ಲಿ ಕಿರಿದಾದ ರಸ್ತೆ ಹಾಗೂ ಸೇತುವೆ ವಿಸ್ತರಿಸುವ ಕಾರ್ಯಕ್ಕೂ ಮುಂದಾಗುತ್ತೇವೆ.

- ಜಯಕುಮಾರ್ ಎಇಇ ಲೋಕೋಪಯೋಗಿ ಇಲಾಖೆ‌, ಪಾಂಡವಪುರ