ಸಾರಾಂಶ
ಕನ್ನಡ ಎನ್ನುವುದು ಜೀವನ ವಿಧಾನವಾಗಿದೆ. ಇಂಗ್ಲಿಷ್, ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ನಮ್ಮ ಭಾಷೆ ಕಾಪಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಬೆಂಗಳೂರು : ಕನ್ನಡ ಎನ್ನುವುದು ಜೀವನ ವಿಧಾನವಾಗಿದೆ. ಇಂಗ್ಲಿಷ್, ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ನಮ್ಮ ಭಾಷೆ ಕಾಪಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡವು ಕಲಿತವರಿಗೆ ಅಮೃತವಾಗಿದೆ. ನಡೆದವರಿಗೆ ನೆರಳಾಗಿ ದಾರಿದೀಪವಾಗಿದೆ. ಕರ್ನಾಟಕವು ಸಂಸ್ಕೃತಿಯ ಬೀಡಾಗಿದ್ದು, ಕನ್ನಡ ಜೀವನದ ವಿಧಾನವಾಗಿದೆ. ಇದನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ಕರ್ನಾಟಕ ಶಾಂತಿಯಿಂದ ಕೂಡಿದೆ. ಇದೇ ನಮ್ಮ ಕನ್ನಡ ತಾಯಿ, ಭೂಮಿಯ ವಿಶೇಷವಾಗಿದೆ. ಇಲ್ಲಿರುವ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕೃತಿ, ನೆಲ-ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ ಎಂದು ಬಣ್ಣಿಸಿದರು.
ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವು ಸ್ಮರಿಸಬೇಕು. ಅನೇಕ ಹಿರಿಯರು ಈ ನೆಲ, ಜಲ, ಭಾಷೆ, ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ಕುವೆಂಪು ಅವರು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳ್ಗೆಗೆ ದುಡಿಯಬೇಕು ಎಂದು ಕೋರಿದರು.
ಶೇ.60 ಕನ್ನಡ ಬಳಕೆಗೆ ಆದೇಶ:
ಆದಿಕವಿ ಪಂಪ, ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು, ಬೇಂದ್ರೆ, ಮಾಸ್ತಿ ಹೀಗೆ ದೊಡ್ಡ ಪರಂಪರೆ ಹೊಂದಿರುವ ನಮ್ಮ ಸಾಹಿತ್ಯವನ್ನು ಇಂದಿನ ಮಕ್ಕಳು ಅಭ್ಯಾಸ ಮಾಡಬೇಕು. ಕನ್ನಡಕ್ಕೆ ಆದ್ಯತೆ ನೀಡಲು ವಾಣಿಜ್ಯ ಮಳಿಗೆ, ಅಂಗಡಿಗಳು ಸೇರಿ ವ್ಯಾಪಾರ ವಹಿವಾಟಿನ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.
5,000 ಯುಕೆಜಿ, ಎಲ್‌ಕೆಜಿ ಆರಂಭ: ಮಧು ಬಂಗಾರಪ್ಪ
ಸರ್ಕಾರದಿಂದ 5 ಸಾವಿರ ಪೂರ್ವ ಪ್ರಾಥಮಿಕ ಶಾಲೆಗಳನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಸರ್ಕಾರವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. 51 ಸಾವಿರ ಅತಿಥಿ ಶಿಕ್ಷಕರನ್ನು ಒಂದೇ ಸಲ ನೇಮಕ ಮಾಡಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರ ಗೌರವ ಧನವನ್ನು 2 ಸಾವಿರ ರು.ನಷ್ಟು ಹೆಚ್ಚಳ ಮಾಡಲಾಗಿದೆ. ಶಾಲಾ ಕೊಠಡಿ ಸೇರಿ ಮೂಲಭೂತ ಸೌಕರ್ಯಕ್ಕಾಗಿ ₹850 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭಿಸಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ 5 ಸಾವಿರ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
)
;Resize=(128,128))
;Resize=(128,128))
;Resize=(128,128))
;Resize=(128,128))