ಕುಂದಾನಗರಿ, ಬಾರಿಸಿದ ಕನ್ನಡ ನಗಾರಿ

| Published : Nov 02 2025, 04:15 AM IST

ಸಾರಾಂಶ

ಎಲ್ಲಿ ನೋಡಿದರಲ್ಲಿ ಹಳದಿ, ಕೆಂಪು ಬಣ್ಣಗಳ ಚಿತ್ತಾರ. ಕನ್ನಡ ಬಾವುಟಗಳ ಹಾರಾಟ. ಕನ್ನಡಕ್ಕಾಗಿ ಮಿಡಿಯುವ ಹೃದಯಗಳು ಅಲ್ಲಿ ಒಟ್ಟಾಗಿ ಸೇರಿದ್ದವು. ಕನ್ನಡದ ಹಾಡುಗಳಿಗೆ ಅಲ್ಲಿ ಹೆಜ್ಜೆ ಹಾಕುವವರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದ್ದವು. ಎತ್ತ ನೋಡಿದರೂ ಕನ್ನಡದ ಹಬ್ಬದ ಕಲರವ....

ಕನ್ನಡಪ್ರಭ ವಾರ್ತೆ ಬೆಳಗಾವಿ

ಎಲ್ಲಿ ನೋಡಿದರಲ್ಲಿ ಹಳದಿ, ಕೆಂಪು ಬಣ್ಣಗಳ ಚಿತ್ತಾರ. ಕನ್ನಡ ಬಾವುಟಗಳ ಹಾರಾಟ. ಕನ್ನಡಕ್ಕಾಗಿ ಮಿಡಿಯುವ ಹೃದಯಗಳು ಅಲ್ಲಿ ಒಟ್ಟಾಗಿ ಸೇರಿದ್ದವು. ಕನ್ನಡದ ಹಾಡುಗಳಿಗೆ ಅಲ್ಲಿ ಹೆಜ್ಜೆ ಹಾಕುವವರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದ್ದವು. ಎತ್ತ ನೋಡಿದರೂ ಕನ್ನಡದ ಹಬ್ಬದ ಕಲರವ....

ಇದು 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗಡಿ ಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ಮೊಳಗಿದ ಕನ್ನಡದ ಡಿಂಡಿಮ. ಸಾವಿರಾರು ಕನ್ನಡಿಗರು ಒಂದೇ ಕಡೆ ಸೇರುವ ಮೂಲಕ ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಮತ್ತೆ ಹೊಸ ಇತಿಹಾಸ ಬರೆಯಿತು. ಕನ್ನಡ ಹಾಡುಗಳಿಗೆ ಯುವಕ-ಯುವತಿಯರು ಹುಚ್ಚೆದ್ದು ಕುಣಿದರು. ಇಡೀ ಬೆಳಗಾವಿ ಕನ್ನಡಮಯ ಆಗಿತ್ತು.ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ಕಂಡುಬಂದ ರಾಜ್ಯೋತ್ಸವ ಸಡಗರದ ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಗಡಿಯಲ್ಲಿ ನಾಡದೇವಿ ಭುವನೇಶ್ವರಿಯ ವೈಭವ ಮರುಕಳಿಸುವಂತೆ‌ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.ತಂಡೋಪ‌ ತಂಡವಾಗಿ ಆಗಮಿಸಿದ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು, ಹಿರಿಯರು ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾದರು. ಶುಕ್ರವಾರ ತಡರಾತ್ರಿಯೇ ಆರಂಭವಾದ ರಾಜ್ಯೋತ್ಸವ ಸಂಭ್ರಮ ಶನಿವಾರ ಇಡೀ ದಿನ ಮುಂದುವರಿಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಜೈಕಾರಗಳು ಮುಗಿಲು ಮುಟ್ಟಿದವು. ಕಣ್ಣು ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಎಲ್ಲೆಲ್ಲೂ ಕನ್ನಡ ಝೇಂಕಾರ ಮೊಳಗಿತು. ಕೆಂಪು- ಹಳದಿ ಬಣ್ಣದ ದಿರಿಸು ಧರಿಸಿ‌ ಬಂದ ಹಲವರು ಕನ್ನಡ ಧ್ವಜವನ್ನು ಪ್ರತಿನಿಧಿಸುವಂತೆ ಕಂಡರು.

ಯುವಕರು ಕನ್ನಡಮಯ ಶಾಲು ಹಾಕಿಕೊಂಡು ಸಂಭ್ರಮಿಸಿದರೆ, ಯುವತಿಯರು ತಾವೇನೂ ಕಮ್ಮಿ ಇಲ್ಲ ಎಂಬಂತೆ ಕೆಣ್ಣೆಗಳ ಮೇಲೆ ಕನ್ನಡ ಧ್ಚಜದ ಬಣ್ಣ ಬಳಿದುಕೊಂಡು ಖುಷಿಪಟ್ಟರು. ಅಪಾರ ಸಂಖ್ಯೆಯಲ್ಲಿ ಸೇರಿದ ಜನರಿಂದ ರಸ್ತೆಗಳು, ವೃತ್ತಗಳು ಕಿಕ್ಕಿರಿದು ತುಂಬಿದವು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಯಿತು.ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಛತ್ರಪತಿ ಸಂಭಾಜಿ ವೃತ್ತ ಹಾಗೂ ಈ ಮೂರೂ ವೃತ್ತಿಗಳನ್ನು ಸಂಪರ್ಕಿಸುವ ಕಾಲೇಜು ರಸ್ತೆ, ಕಾಕತಿವೇಸ್, ಬೋಗಾರ್ ವೇಸ್, ಅಂಬೇಡ್ಕರ್ ಮಾರ್ಗ, ಡಾ.ರಾಜ್ ಕುಮಾರ್ ಮಾರ್ಗಗಳಲ್ಲಿ ಜನ ಕಿಕ್ಕಿರಿದು ತುಂಬಿದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ಸಾಧ್ಯವಾಗದ ರೀತಿ ಜನಸಂದಣಿ ಉಂಟಾಯಿತು.ಹುಟ್ಟಿದರೆ ಕನ್ನಡ ನಾಡಲ್ಲಿ‌ ಹುಟ್ಟಬೇಕು, ಯಾರಪ್ಪಂದು ಏನೈತಿ- ಬೆಳಗಾವಿ ನಮ್ಮದೈತಿ, ದಿಲ್ ಇದ್ರೆ ಬಾ- ಧಮ್ ಇದ್ರೆ ಬಾ ಮುಂತಾದ ಹಾಡುಗಳು ಯುವಜನರ ಉನ್ಮಾದ ಹೆಚ್ಚಿಸಿದವು. ಕಿವಿಗಡಚಿಕ್ಕುವ ಶಬ್ದ, ಸಿಳ್ಳೆ, ಕೇಕೆಗಳ ಮಳೆ, ಎದೆ ನಡುಗಿಸಿವಂಥ ಡಿ.ಜೆ ಸೌಂಡ್ ಸಿಸ್ಟಂ, ಕ್ಷಣಕ್ಷಣಕ್ಕೂ ಚಿತ್ರಗೀತೆಗಳಿಗೆ ಕನ್ನಡಾಭಿಮಾನಿಗಳು ದಣಿವರಿಯದೇ ಕುಣಿದರು. ಅವರನ್ನು ನೋಡುತ್ತ ನಿಂತವರ ಹೃದಯಗಳಲ್ಲೂ ಅಭಿಮಾನ ಉಕ್ಕೇರಿತು.ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಇಮ್ಮಡಿ ಪುಲಿಕೇಶಿ, ರಾಯಣ್ಣ, ಹಂಪಿಯ ಕಲ್ಲಿನ ರಥ, ಹಲಸಿಯ ದೇವಸ್ಥಾನ, ಕಾಂತಾರ ಚಿತ್ರದ ಮಾದರಿ. ಹೀಗೆ 120 ಕ್ಕೂ ಹೆಚ್ಚು ವೈವಿಧ್ಯಮಯ ರೂಪಕಗಳೂ ಗಮನ ಸೆಳೆದವು.