ಸಾರಾಂಶ
ನಂದಿಕೂರಿನಲ್ಲಿರುವ ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಪಕ್ಕದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾಮಗಾರಿಯನ್ನು ಸ್ಥಳೀಯರ ವಿರೋಧದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ನಂದಿಕೂರಿನಲ್ಲಿರುವ ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಪಕ್ಕದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾಮಗಾರಿಯನ್ನು ಮಂಗಳವಾರ ಪುನಃ ಆರಂಭಿಸಲು ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆ, ಸ್ಥಳಕ್ಕೆ ಧಾವಿಸಿ ಬಂದ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ವಿರೋಧವನ್ನೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿದರು.ಈ ಸಂದರ್ಭ ಮಾತನಾಡಿದ ಮುನಿಯಾಲು, ಕೇಂದ್ರ ಬಿಜೆಪಿ ಸರ್ಕಾರದ ಯೋಜನೆ ಇದು, ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ಅನುಮತಿಯಿಂದ ಯೋಜನೆಯು ಅನುಮೋದನೆಗೊಂಡಿದ್ದು, ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಇಲ್ಲಿನ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹಾದು ಹೋಗುವುದರಿಂದ ನೂರಾರು ಕೃಷಿಕರು ಸಂತ್ರಸ್ತರಾಗುವ ಅಪಾಯವಿದೆ ಎಂದರು.ಕೃಷಿ ಭೂಮಿಯನ್ನು, ಜನರ ಬದುಕನ್ನು ನುಂಗುವ ಈ ಯೋಜನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಬಿಜೆಪಿ ನಾಯಕರಿಗೆ ಇಚ್ಛಾ ಶಕ್ತಿಯಿದ್ದರೆ, ಕೇಂದ್ರ ಇಂಧನ ಸಚಿವರ ಮುಂದೆ ಕುಳಿತು ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಲಿ ಎಂದು ಆಗ್ರಹಿಸಿದರು.ನಂತರ ಅವರು ಉಡುಪಿ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.