ಸಾರಾಂಶ
ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಲು ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸುಸ್ಥಿರ ಆರೋಗ್ಯಕರ ಸಮಾಜ ನಿರ್ಮಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಅಂಕಿ ಅಂಶಗಳನ್ನು ಗಮನಿಸಿದರೆ ಡೆಂಘೀ ಹಾಗೂ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಇನ್ನಷ್ಟು ಪರಿಣಾಮಕಾರಿ ಮಾರ್ಗಗಳನ್ನು ಕೈಗೊಳ್ಳುವ ಅಗತ್ಯವಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಡಿ.7ರಿಂದ ಮುಂದಿನ 100 ದಿನಗಳ ವರೆಗೆ ಜಿಲ್ಲೆಯಾದ್ಯಂತ ಕ್ಷಯ ರೋಗ ತಪಾಸಣಾ ಶಿಬಿರವನ್ನು (ಟಿ.ಬಿ ಕ್ಯಾಂಪ್) ಆಯೋಜಿಸಲಾಗುತ್ತಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ “ಕ್ಷಯ ರೋಗ ತಡೆಗಟ್ಟುವ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.6ರೊಳಗೆ ಕ್ರಿಯಾ ಯೋಜನೆ ಸಿದ್ಧ
100 ದಿನಗಳ ಟಿ.ಬಿ ಕ್ಯಾಂಪ್ ನ ಕ್ರಿಯಾ ಯೋಜನೆಯನ್ನು ಡಿ. 6ರ ಒಳಗಾಗಿ ಸಿದ್ದಪಡಿಸಬೇಕು. ಪ್ರತಿ ಹಳ್ಳಿ, ಗ್ರಾಮ, ವಾರ್ಡ್ ಗಳಲ್ಲಿ ಕ್ಷಯರೋಗ ತಪಾಸಣೆಯನ್ನು ಕೈಗೊಂಡು ಪ್ರತಿ ದಿನ ಜಿಲ್ಲಾ ಮಟ್ಟಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಮುಖಾಂತರ ವರದಿ ಸಲ್ಲಿಸಬೇಕು. ಕ್ಷಯರೋಗ ದೃಢಪಟ್ಟವರನ್ನು ತ್ವರಿತವಾಗಿ ಆರೋಗ್ಯ ಚಿಕಿತ್ಸೆಗೆ ಒಳಪಡಿಸಬೇಕು. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಷಯರೋಗಿಗಳ ಚಿಕಿತ್ಸೆಗಾಗಿ 2 ಹಾಸಿಗೆಗಳನ್ನು ಮೀಸಲಿಡಬೇಕು ಕ್ಷಯರೋಗಿಗಳನ್ನು ದತ್ತು ತೆಗೆದುಕೊಳ್ಳುವ ನಿಕ್ಷಯ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಪ್ರೇರಿಪಿಸಬೇಕು ಎಂದು ಸೂಚಿಸಿದರು.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕ್ಷಯ ರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸಬೇಕು. ಜನಪ್ರತಿನಿಧಿಗಳ ಮೂಲಕ ಕ್ಷಯ ನಿರ್ಮೂಲನಾ ಪ್ರತಿಜ್ಞಾ ವಿಧಿಯನ್ನು ಸಾರ್ವಜನಿಕರಿಗೆ ಬೋಧಿಸಬೇಕು. ಜಿಲ್ಲೆಯಲ್ಲಿರುವ ಗಾರ್ಮೇಂಟ್ಸ್ ಮತ್ತು ಕಾರ್ಖಾನೆಗಳಲ್ಲಿನ ಕಾರ್ಮಿಕರು, ಚಾಲಕರು, ಸಾರಿಗೆ ನಿರ್ವಾಹಕರು, ಕ್ರಷರ್‌ಗಳಲ್ಲಿ ಕಾರ್ಮಿಕರು, ಜೈಲ್ ನಲ್ಲಿರುವ ಕೈದಿಗಳಿಗೆ ಹಾಗೂ ಪೌರಕಾರ್ಮಿಕರನ್ನು ಒಳಗೊಂಡಂತೆ ಸಾರ್ವಜನಿಕರಲ್ಲಿ ಕ್ಷಯರೋಗ ತಪಾಸಣೆಯನ್ನು ಮಾಡಿಸಿ ಅರಿವು ಮೂಡಿಸಬೇಕು ಎಂದರು.ಎಲ್ಲರೂ ಸ್ವಚ್ಛತೆ ಕಾಪಾಡಬೇಕು
ಒಟ್ಟಾರೆ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಲು ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃಕತರಾಗುವ ಮೂಲಕ ಸುಸ್ಥಿರ ಆರೋಗ್ಯಕರ ಸಮಾಜ ನಿರ್ಮಿಸಬೇಕು. ಜಿಲ್ಲೆಯಲ್ಲಿ 2023 ನೇ ಸಾಲಿನಲ್ಲಿ 243 ಡೆಂಘೀ ಪ್ರಕರಣಗಳು ದಾಖಲೆಯಾಗಿದ್ದವು 2024 ರಲ್ಲಿ 369 ಪ್ರಕರಣಗಳು ಈ ವರೆಗೆ ದಾಖಲಾಗಿವೆ . ಈ ಅಂಕಿ ಅಂಶಗಳು ಡೆಂಗ್ಯೂ ಹಾಗೂ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಇನ್ನಷ್ಟು ಪರಿಣಾಮಕಾರಿ ಮಾರ್ಗಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಈವರೆಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ -31, ಚಿಕ್ಕಬಳ್ಳಾಪುರ- 74, ಗುಡಿಬಂಡೆ- 20 ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 65 ಪ್ರಕರಣಗಳು ದಾಖಲಾಗಿವೆ. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಇನ್ನಷ್ಟು ಕ್ರಮ ಜರುಗಿಸಬೇಕು. ಸಾರ್ವಜನಿಕರಲ್ಲಿ ಸೊಳ್ಳೆಗಳ ಕಡಿತದಿಂದ ತಪ್ಪಿಸಲು ಹಾಗೂ ಸೊಳ್ಳೆಗಳ ಉತ್ಪತ್ತಿಯ ತಾಣಗಳನ್ನು ನಾಶಮಾಡಲು ಅರಿವು ಮೂಡಿಸಬೇಕು. ಚಿಕುನ್ ಗುನ್ಯ, ಮಲೇರಿಯಾ, ಹೆಪಟೈಟೀಸ್, ಆಂಥ್ರಾಕ್ಸ್, ಇಲಿ ಜ್ವರ, ಹೆಚ್1 ಎನ್ 1, ಕಾಲರ ಮುಂತಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮಾರ್ಗಸೂಚಿ ಕ್ರಮಗಳನ್ನು ಜನತೆ ಪಾಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ ರವಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು..