ಸಾರಾಂಶ
ಹಾವೇರಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಕಬ್ಬು ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕಬ್ಬು ಖರೀದಿಗೆ ಬೆಲೆ ನಿಗದಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗಳು ಸಕ್ಕರೆ ಸಚಿವಾಲಯ ಹೊರಡಿಸಿರುವ ಆದೇಶದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ಜಿ.ಎಂ. ಶುಗರ್ಸ್ ಕಂಪನಿಯವರು ೨೦೨೩- ೨೪ನೇ ಸಾಲಿನಲ್ಲಿ ರೈತರಿಗೆ ಹಣ ನೀಡಲು ವಿಳಂಬ ಮಾಡಿದ್ದಾರೆ. ಹೀಗಾಗಿ, ಕಂಪನಿಯವರು ರೈತರಿಗೆ ರು. ೫೨ ಲಕ್ಷ ಬಡ್ಡಿ ನೀಡಬೇಕು ಎಂದು ಹೇಳಿದರು.ಈ ವೇಳೆ ಕಬ್ಬು ಬೆಳೆಗಾರರು ಈ ಸಭೆಯಲ್ಲಿಯೇ ಪ್ರಸಕ್ತ ವರ್ಷ ದರ ನಿಗದಿ ಮಾಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಕಾರ್ಖಾನೆಯವರು ದರ ನಿಗದಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿದರು. ಹೀಗಾಗಿ ಶನಿವಾರದವರೆಗೆ ಸಮಯಾವಕಾಶ ನೀಡಲು ರೈತರು ಒಪ್ಪಿಕೊಂಡರು. ಗೆಟ್ ಕೆನ್ ಮಾಡದೇ ಫೀಲ್ಡ್ ಕೆನ್ ಕಬ್ಬು ಖರೀದಿ ಮಾಡಬೇಕು, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳು ಭರಿಸಬೇಕು ಎಂದು ರೈತರು ಪಟ್ಟುಹಿಡಿದಾಗ ಮಾಲೀಕರ ಜೊತೆ ಇನ್ನೂ ಒಂದು ಸಾರಿ ಚರ್ಚೆ ಮಾಡಿ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆಯನ್ನು ಕರೆಯುತ್ತೇವೆ ಎಂದು ಕಾರ್ಖಾನೆಯವರು ಭರವಸೆ ನೀಡಿದರು. ಪ್ರತಿ ಲೋಡ್ ತೂಕ ಆದ ತಕ್ಷಣವೇ ರೈತರಿಗೆ ಮೆಸೇಜ್ ಬರಬೇಕು ೧೫ ದಿನಕ್ಕೊಮ್ಮೆ ಸಕ್ಕರೆ ರೀಕವರಿಯನ್ನು ರೈತ ಮುಖಂಡರ ಜೊತೆ ಮಾಡಿಸಬೇಕು ಹತ್ತು ದಿನಕ್ಕೊಮ್ಮೆ ಬಿಲ್ ಹಾಕಬೇಕು ತೂಕ ಮತ್ತು ಅಳತೆ ಮಾಡುವವರು ರೈತ ಮುಖಂಡರನ್ನು ಇಟ್ಟುಕೊಂಡು ಪರಿಶೀಲಿಸಬೇಕು. ಕಾರ್ಖಾನೆ ಆವರಣದಲ್ಲಿ ಹಾಳಾದ ರಸ್ತೆಯನ್ನು ದುರಸ್ತಿ ಮಾಡಬೇಕು, ವಾಯುಮಾಲಿನ್ಯ ಅಧಿಕಾರಿಗಳು ಕಾರ್ಖಾನೆಗೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಕಾರ್ಖಾನೆಯಿಂದ ಆಗುವ ತೊಂದರೆಗಳನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿದರು.ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಗದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ್ ಬೆಟಗೇರಿ, ಈರಣ್ಣ ಮಾಕನೂರ, ಮಂಜುನಾಥ ಅಸುಂಡಿ, ದಾನೇಶಪ್ಪ, ಗಣೇಶ ಸವಣೂರು, ಮುತ್ತಣ್ಣ ಗುಡಗೇರಿ ಸೇರಿದಂತೆ ಇತರರು ಇದ್ದರು.