ಸಾರಾಂಶ
ಯಲ್ಲಾಪುರ: 3ನೇ ವಿಶ್ವ ಹವ್ಯಕ ಸಮ್ಮೇಳನವನ್ನು ಎಲ್ಲ ಜಾತಿ, ಜನಾಂಗದವರಿಗೂ ಆದರ್ಶಪ್ರಾಯವಾಗುವಂತೆ ಆಯೋಜಿಸಿದ್ದೇವೆ. ಸಮ್ಮೇಳನದಲ್ಲಿ ಎಲ್ಲ ಜನಾಂಗದ ಸಮಾಜದ ಮುಖಂಡರು ಭಾಗವಹಿಸುವರು. ಹವ್ಯಕರ ಸಂಸ್ಕೃತಿ, ಪರಂಪರೆ, ಮೌಲ್ಯದ ಅರಿವನ್ನು ಮೂಡಿಸಲಾಗುವುದು ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದರು.ಡಿ. ೨ರಂದು ಶ್ರೀ ಶಕ್ತಿಗಣಪತಿ ಸಭಾಭವನದಲ್ಲಿ ಅಖಿಲ ಹವ್ಯಕ ಮಹಾಸಭೆ ಹಮ್ಮಿಕೊಂಡ ೩ನೇ ವಿಶ್ವ ಹವ್ಯಕ ಸಮ್ಮೇಳನದ ಪ್ರಯುಕ್ತ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ನಮ್ಮ ಈ ಕಾರ್ಯಕ್ರಮ ಪ್ರತಿಯೊಂದು ವರ್ಗಕ್ಕೂ ಆದರ್ಶಪ್ರಾಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ನಮ್ಮ ಪ್ರಾಚೀನರು ಈ ಮಹಾಸಭೆಯನ್ನು ಪ್ರಾರಂಭಿಸಿದ್ದಾರೆ. ಈಗ ೮೧ ವರ್ಷ ಪೂರ್ತಿಗೊಂಡಿದೆ. ೮೧ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದರಲ್ಲೂ ಹವ್ಯಕರ ಹೊರತಾಗಿಯೂ ಅನೇಕ ಸಾಧಕರನ್ನೂ ಸೇರಿಸಿ ೫೬೭ ಜನರಿಗೆ ಸಮ್ಮೇಳನದಲ್ಲಿ ಸನ್ಮಾನ ಮಾಡುತ್ತಿದ್ದೇವೆ. ಬೇರೆ ಬೇರೆ ಜಾತಿಯವರೂ ಸಮ್ಮೇಳನದಲ್ಲಿ ಭಾಗವಹಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದು ಪ್ರತಿಯೊಂದು ಸಮಾಜವೂ ಗಮನಿಸುವಂತಹ ಪರಿಪೂರ್ಣತೆಯನ್ನು ಹೊಂದಿದೆ ಎಂದರು.ಜಗತ್ತಿನಲ್ಲೇ ಈ ಹವ್ಯಕರು ಅದರಲ್ಲೂ ಪೌರೋಹಿತ್ಯ, ವೇದಗಳನ್ನೆಲ್ಲ ಅಧ್ಯಯನ ಮಾಡಿ ಲೋಕ ಕಲ್ಯಾಣಾರ್ಥವಾಗಿ ಯಜ್ಞ, ಯಾಗಾದಿಗಳನ್ನು ನಡೆಸಿಕೊಂಡು ಬಂದ ಪರಂಪರೆ ನಮ್ಮದು. ಮಯೂರವರ್ಮನ ಕಾಲದಲ್ಲಿ ಉತ್ತರಪ್ರದೇಶದ ಅಹಿಛತ್ರದಿಂದ ಬಂದ ನಾವು, ನಮ್ಮ ಪ್ರಾಚೀನರು ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದ್ದಾರೆ. ಆದರೆ ಇಂದು ನಮ್ಮತನ, ಸಂಸ್ಕೃತಿ, ಸಂಸ್ಕಾರ, ಜನಾಂಗದ ಸಂಖ್ಯೆ ಉಳಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿದ್ದೇವೆ. ಇದೇ ಡಿ. ೨೭, ೨೮, ೨೯ರಂದು ೩ ದಿನಗಳ ಕಾಲ ನಡೆಯುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿ ಮನೆಯಿಂದಲೂ ಭಾಗವಹಿಸುವಂತೆ ಕೋರಿದರು.
ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸ್ವತಃ ಕಜೆಯವರು ವೈದ್ಯರಾಗಿ ೨೧ ಆಸ್ಪತ್ರೆಗಳನ್ನು ನಡೆಸಿಕೊಳ್ಳುತ್ತಾ, ತೀವೃ ಒತ್ತಡದಲ್ಲಿದ್ದರೂ ಇಂತಹ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ನಾವೆಲ್ಲ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.ಈ ಸಂದರ್ಭದಲ್ಲಿ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಹಿರಿಯ ಸಹಕಾರಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ನಿರ್ದೇಶಕ ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು. ನಾನಿಕಾ ಭಟ್ಟ ಭಗವದ್ಗೀತೆ ಪಠಿಸಿದಳು. ಮಹಾಸಭಾ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ ನಿರ್ವಹಿಸಿದರು. ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ವಂದಿಸಿದರು.