ಗ್ರಾಹಕರಿಗೆ ತೆಂಗಿನಕಾಯಿ ಬೆಲೆ ಏರಿಕೆ ಬಿಸಿ

| Published : Dec 04 2024, 12:34 AM IST

ಗ್ರಾಹಕರಿಗೆ ತೆಂಗಿನಕಾಯಿ ಬೆಲೆ ಏರಿಕೆ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಗಿನಕಾಯಿ ಮಾರುಕಟ್ಟೆಗಳಲ್ಲಿಯೇ ಕ್ವಿಂಟಲ್‌ಗೆ ಸಗಟು ಬೆಲೆ ₹5200 ರಿಂದ ₹5400 ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ಸಗಟು ವ್ಯಾಪಾರಸ್ಥರಿಂದ ₹58ರಿಂದ ₹60 ಗೆ. ಖರೀದಿಸುತ್ತಾರೆ.

ಶಿವಾನಂದ ಅಂಗಡಿಹುಬ್ಬಳ್ಳಿ:

ಮಹಾನಗರದ ಹೊಟೇಲ್‌ ಹಾಗೂ ಮಾಂಸಹಾರಿಗಳಿಗೆ ಶೇರವಾ ಹಾಗೂ ಮನೆ ಮನೆಯಲ್ಲೂ ಚಟ್ನಿ, ಸಾಂಬಾರ ಸೇರಿದಂತೆ ಮಂಗಲ ಕಾರ್ಯಗಳಿಗೆ ಹೆಚ್ಚು ಹೆಚ್ಚು ಬಳಕೆಯಾಗುವ ತೆಂಗಿನಕಾಯಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ತಲೆಬಿಸಿ ಮೂಡಿಸಿದೆ.

ರಾಜ್ಯದ ಮಲೆಬೆನ್ನೂರು, ಕುಂದಾಪುರ, ಹೊನ್ನಾವರ, ಕಡೂರ, ಕುಮಟಾ, ತಿಪಟೂರ, ಅರಸಿಕೆರೆ, ತರಿಕೆರೆ, ತುಮಕೂರು ಹೀಗೆ ನಾನಾ ಕಡೆ ತೆಂಗಿನಕಾಯಿ ಮಾರುಕಟ್ಟೆ ಇದ್ದು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ಇಲ್ಲಿಂದಲೇ ತೆಂಗಿನಕಾಯಿ ರವಾನೆಯಾಗುತ್ತದೆ.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸಂತೆ ಮಾರುಕಟ್ಟೆಗಳಲ್ಲಿ ನೀವು ತೆಂಗಿನಕಾಯಿ ಬೆಲೆಗಳನ್ನು ಕೇಳಿದಾಗ ಗಾಬರಿಯಾಗಿರುತ್ತೀರಿ, ಯಾಕೆ ಇಷ್ಟು ದರ ಜಾಸ್ತಿಯಾಯಿತು ಎಂದು ವ್ಯಾಪಾರಸ್ಥರನ್ನು ವಿಚಾರಿಸಿರುತ್ತೀರಿ, ತೆಂಗಿನ ತೋಟಗಳಲ್ಲಿ ಈ ಬಾರಿ ಇಳುವರಿಯೇ ಜಾಸ್ತಿ ಬಂದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಮಾರಾಟಕ್ಕೆ ಹೋಗುತ್ತಿರುವುದರಿಂದ ತೆಂಗಿನಕಾಯಿ ಅಭಾವ ಉಂಟಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ತೆಂಗಿನಕಾಯಿ ಮಾರುಕಟ್ಟೆಗಳಲ್ಲಿಯೇ ಕ್ವಿಂಟಲ್‌ಗೆ ಸಗಟು ಬೆಲೆ ₹5200 ರಿಂದ ₹5400 ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ಸಗಟು ವ್ಯಾಪಾರಸ್ಥರಿಂದ ₹58ರಿಂದ ₹60 ಗೆ. ಖರೀದಿಸುತ್ತಾರೆ.

ಸಣ್ಣ, ಮಧ್ಯಮ, ದೊಡ್ಡ ಎಂದು ಇದರಲ್ಲಿ ಮೂರು ವಿಧಗಳಿದ್ದು, ಕಿಲೋಗೆ ಎರಡು ಕಾಯಿ ಮಾತ್ರ ಬರುತ್ತವೆ. 100 ಕಾಯಿ ಸೇರಿದಂತೆ ಸಾವಿರ ಲೆಕ್ಕದಲ್ಲಿಯೂ ಅವುಗಳ ಅಳತೆಗನುಗುಣವಾಗಿ ಕಾಯಿಗಳು ಮಾರಾಟವಾಗುತ್ತಿವೆ.

ಕಳೆದ ವರ್ಷ ಕಿಲೋಗೆ ₹35 ಮಾತ್ರ ಇತ್ತು. ಈ ಬಾರಿ ಇಳುವರಿ ಅಭಾವದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕಿಲೋಗೆ ₹ 20 ಹೆಚ್ಚಾಗಿದೆ. ಸಹಜವಾಗಿಯೇ ಚಿಲ್ಲರೇ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದ್ದು, ₹20 ಗೆ ಮಾರುತ್ತಿದ್ದ ಸಣ್ಣ ಕಾಯಿ ₹ 25, ಮಧ್ಯಮಗಾತ್ರದ ಕಾಯಿ ₹35ರಿಂದ ₹40, ದೊಡ್ಡಕಾಯಿ ₹50ರಿಂದ ₹60ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಹೆಚ್ಚಳ ಭಾರವಾಗುತ್ತಿದೆ.

ಎಪಿಎಂಸಿಯಿಂದ ತೆಂಗಿನಕಾಯಿ ರವಾನೆ

ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸಗಟು ಮಾರಾಟದ 15ಕ್ಕೂ ಹೆಚ್ಚು ಅಂಗಡಿಗಳು ಇದ್ದು, ಪ್ರತಿಯೊಂದು ಅಂಗಡಿಗಳಿಗೆ ದಿನಾಲೂ 7 ಸಾವಿರ ತೆಂಗಿನಕಾಯಿ ತುಂಬಿದ ಒಂದೊಂದು ಲೋಡ್‌ ಬರುತ್ತವೆ. ಇಲ್ಲಿಂದಲೇ ಹುಬ್ಬಳ್ಳಿಯ ಜನತಾ ಬಜಾರ್‌, ದುರ್ಗದಬೈಲ್‌, ಹಳೆಹುಬ್ಬಳ್ಳಿ ಮಾರುಕಟ್ಟೆ, ತಾಲೂಕು ಕೇಂದ್ರಗಳು ಸೇರಿದಂತೆ ಸಂತೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡುವವರು ಖರೀದಿಸುತ್ತಾರೆ.

ಎಳನೀರು, ತೆಂಗಿನಕಾಯಿ, ಒಣಕೊಬ್ಬರಿ, ಕೊಬ್ಬರಿಎಣ್ಣೆ ಉತ್ಪಾದನೆಗೆ ತೆಂಗಿನಕಾಯಿ ಹೋಗುತ್ತಿದ್ದು, ಹೀಗಾಗಿ ತೆಂಗಿನ ಕೃಷಿಯಲ್ಲಿ ತೊಡಗಿದವರು ಕೈಸುಟ್ಟಕೊಂಡ ಉದಾಹರಣೆಗಳಿಲ್ಲ.

ಒಣಗೊಬ್ಬರಿ ಸಹ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋ ₹240 ವರೆಗೂ ಮಾರಾಟವಾಗುತ್ತಿದೆ. ಶುದ್ಧ ಕೊಬ್ಬರಿ ಎಣ್ಣಿ ಕಳೆದ ಬಾರಿ ಲೀಟರ್‌ಗೆ ₹200 ಇತ್ತು. ಈ ಬಾರಿ ₹250 ಗೆ. ಲೀಟರ್‌ ಮಾರಾಟವಾಗುತ್ತಿದ್ದು, ₹50 ಬೆಲೆ ಹೆಚ್ಚಳವಾಗಿದೆ.

ಹೋಟೆಲ್‌ಗಳಲ್ಲಿ ದಿನವೊಂದಕ್ಕೆ 20ಕ್ಕೂ ಹೆಚ್ಚು ತೆಂಗಿನಕಾಯಿ ಬೇಕು, ಚಟ್ನಿ, ಸಾಂಬಾರ ತಯಾರಿಸಲು ನಾವು ದೊಡ್ಡ ತೆಂಗಿನಕಾಯಿ ತರುತ್ತಿದ್ದು, ಹೋಲ್‌ಸೇಲ್‌ನಲ್ಲಿ ₹35ರಿಂದ ₹40 ಗೆ. ಮಾರುತ್ತಿದ್ದಾರೆ. ಇದರಿಂದ ಉದ್ಯಮ ನಡೆಸುವುದೇ ಕಷ್ಟವಾಗಿದೆ ಎಂದು ಹೋಟೆಲ್‌ ಮಾಲೀಕ ವಾಸುದೇವ ಶೆಟ್ಟಿ ಹೇಳಿದರು.

ತೆಂಗಿನಕಾಯಿ ಇಳುವರಿ ಈ ಬಾರಿ ಕಡಿಮೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ ದರ ಜಾಸ್ತಿಯಾಗಿದೆ. ತೋಟಗಳಿಂದ ಎಳನೀರು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಹೋಗುತ್ತಿದ್ದು, ಎಳನೀರಿಗೆ ಉತ್ತಮ ಬೆಲೆ ದೊರೆಯುತ್ತಿದೆ ಹುಬ್ಬಳ್ಳಿ ಎಪಿಎಂಸಿ ಕಾಯಿ ವ್ಯಾಪಾರಸ್ಥ ಯೋಗೇಂದ್ರ ಎನ್‌. ದಫೇದಾರ ಹೇಳಿದರು.