ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಚಿವರನ್ನು ಭೇಟಿ ಮಾಡಿದ ನಾರಾಯಣಗೌಡ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಶಂಸಿಸಿದರು.ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಈ ನಗರವು ಸ್ವಚ್ಛ, ಸುಂದರ, ವ್ಯವಸ್ಥಿತ ಮತ್ತು ಸುರಕ್ಷಿತವಾಗಿರಬೇಕು. ಅದಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಚ್ಛಾಶಕ್ತಿ ಮುಖ್ಯ, ಅದು ಕೃಷ್ಣಬೈರೇಗೌಡ ಅವರಿಗೆ ಇದೆ. ಆ ನಿಟ್ಟಿನಲ್ಲಿ ಸಚಿವರ ಪ್ರಯತ್ನಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ. ರಾಜ್ಯ ಸರ್ಕಾರ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಶ್ಲಾಘನೀಯವಾದದ್ದು ಎಂದು ಹೇಳಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳಿಗಾಗಿ ಮೀಸಲಿಟ್ಟಿರುವ ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಕಟ್ಟಡಗಳು, ಶಾಶ್ವತ ಮತ್ತು ತಾತ್ಕಾಲಿಕ ಅಂಗಡಿ ಮುಂಗಟ್ಟುಗಳು ಹಾಗೂ ಅನಧಿಕೃತ ವ್ಯಾಪಾರ ಚಟುವಟಿಕೆಗಳನ್ನು ತೆರವುಗೊಳಿಸುತ್ತಿರುವುದು ಸರಿಯಾದ ಕ್ರಮವಾಗಿದೆ. ಇದು ಯಾವುದೇ ವ್ಯಕ್ತಿ ಅಥವಾ ವ್ಯಾಪಾರಿಗಳ ವಿರುದ್ಧದ ಕ್ರಮವಲ್ಲ. ಯಾರನ್ನೋ ಗುರಿಯಾಗಿಟ್ಟುಕೊಂಡು ಅವರು ಈ ಕಾರ್ಯಚರಣೆ ನಡೆಸುತ್ತಿಲ್ಲ. ಬದಲಾಗಿ ಬೆಂಗಳೂರಿನ ಕೋಟ್ಯಂತರ ನಾಗರಿಕರ ಸುರಕ್ಷತೆ, ಸುಗಮ ಸಂಚಾರ ಮತ್ತು ಉತ್ತಮ ಜೀವನಮಟ್ಟಕ್ಕಾಗಿ ಕೈಗೊಳ್ಳುತ್ತಿರುವ ಸಾರ್ವಜನಿಕ ಹಿತದ ಕ್ರಮವಾಗಿದೆ ಎಂದು ನಾರಾಯಣಗೌಡರು ತಿಳಿಸಿದರು.ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಈ ತೆರವು ಕಾರ್ಯಾಚರಣೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಬೆಂಗಳೂರಿನ ಒಟ್ಟು ರಸ್ತೆಗಳ ಪೈಕಿ ಶೇ.10ರಿಂದ 20ರಷ್ಟು ಪ್ರಮುಖ ರಸ್ತೆಗಳಲ್ಲಷ್ಟೇ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ ಉಳಿದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಾರಿಗಳು ತಮ್ಮ ವೃತ್ತಿ ನಡೆಸಲು ಅವಕಾಶವಿದೆ. ಹೀಗಾಗಿ ಪಾದಚಾರಿಗಳ ಹಕ್ಕನ್ನು ರಕ್ಷಿಸುವ ಈ ಕಾರ್ಯಾಚರಣೆಯನ್ನು ವ್ಯಾಪಾರ ವಿರೋಧಿ ಕ್ರಮವೆಂದು ಬಿಂಬಿಸುವುದು ತಪ್ಪು ಎಂದು ಹೇಳಿದರು.
ಬಡ ಮತ್ತು ಸಣ್ಣ ವ್ಯಾಪಾರಿಗಳ ಜೀವನೋಪಾಯದ ಬಗ್ಗೆ ಸರ್ಕಾರ ಮಾನವೀಯ ದೃಷ್ಟಿಕೋನ ಹೊಂದಿರಬೇಕು. ಅಗತ್ಯವಿದ್ದಲ್ಲಿ ಅವರಿಗೆ ಪರ್ಯಾಯ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಬಹುದು. ಆದರೆ ಸಾರ್ವಜನಿಕರ ಓಡಾಟಕ್ಕೆ ಮೀಸಲಾದ ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದನ್ನು ವಿರೋಧಿಸುವುದು ಕಾನೂನಾತ್ಮಕವಾಗಿಯೂ ಸಮರ್ಥನೀಯವಲ್ಲ ಎಂದರು.
ಇದರೊಂದಿಗೆ ತುಕ್ಕು ಹಿಡಿದಿರುವ ಬೀಡಾಡಿ ವಾಹನಗಳ ತೆರವು ಕಾರ್ಯವೂ ಅತ್ಯಂತ ಅಗತ್ಯವಾದ ಕೆಲಸವಾಗಿದೆ. ಎ.ಟಿ. ರಾಮಸ್ವಾಮಿ ಅವರ ನೇತೃತ್ವದ ಸಮಿತಿ ವರದಿಯ ಆಧಾರದ ಮೇಲೆ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಕಾರ್ಯವನ್ನು ಕೈಗೊಳ್ಳಬೇಕು. ಕೆರೆಗಳು ಮತ್ತು ರಾಜಕಾಲುವೆಗಳನ್ನು ಉಳಿಸುವುದು ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯವಾಗಿದೆ ಎಂದು ನಾರಾಯಣಗೌಡ ಅವರು ಸಲಹೆ ನೀಡಿದರು.