ಕನ್ನಡಪ್ರಭ ವಾರ್ತೆ ರಾಮದುರ್ಗ: 27ನೇ ಕಾರ್ಗಿಲ್ ವಿಜಯೋತ್ಸವ ಮತ್ತು ಆಪರೇಷನ್ ಸಿಂದೂರ ಸ್ಮರಣೆಗಾಗಿ ಸಾಲಹಳ್ಳಿಯ ಸೈನಿಕರ ಹಾಗೂ ಮಾಜಿ ಸೈನಿಕರ ಸಂಘದ ಸದಸ್ಯರು ಬೈಕ್ ರ‍್ಯಾಲಿ ಮುಖಾಂತರ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.ತಾಲೂಕಿನ ಸಾಲಹಳ್ಳಿಯ ಬಬಲಾದಿ ಮಠದಿಂದ ಭಾನುವಾರ ಪ್ರಾರಂಭವಾದ ಬೈಕ್ ರ‍್ಯಾಲಿ ಗೋಡಚಿ ವೀರಭದ್ರೇಶ್ವರ ಕ್ಷೇತ್ರ, ಬನ್ನೂರ, ದಾಡಿಬಾಂವಿ ತಾಂಡಾ, ಸೊಪ್ಪಡ್ಲ, ಉದುಪುಡಿ, ಬೀಡಕಿ. ಪಂಚಗಾವಿ ಮುಖಾಂತರ ಕುಳ್ಳೂರು ಶಿವಯೋಗೀಶ್ವರ ಕ್ಷೇತ್ರದವರಗೆ ಮಾಜಿ ಹಾಗೂ ಹಾಲಿ ಸೈನಿಕರು ನಡೆಸಿದರು.
ಬೈಕ್ ರ‍್ಯಾಲಿ ತೆರಳಿದ ಪ್ರತಿ ಗ್ರಾಮದಲ್ಲಿ ಯುವಕರು ಸೈನ್ಯಕ್ಕೆ ಸೇರಲು ಪ್ರೇರಣೆ, ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಅಲ್ಲದೇ, ಕಾರ್ಗಿಲ್ ಮತ್ತು ಆಪರೇಷನ್ ಸಿಂದೂರದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದರು.ಬೈಕ್ ರ‍್ಯಾಲಿಯ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷ ರುದ್ರಪ್ಪ ಸವಟಗಿ, ಉಪಾಧ್ಯಕ್ಷ ವೆಂಕನಗೌಡ ಪಾಟೀಲ, ಕಾರ್ಯದರ್ಶಿ ಬಸವರಾಜ ಚಿಕ್ಕೂರ, ಖಜಾಂಚಿ ಶಿವಾನಂದ ಶಿರಸಂಗಿ, ಸಂಘಟನಾ ಕಾರ್ಯದರ್ಶಿ ಶಿವನಗೌಡ ಪವಾಡಿಗೌಡ್ರ, ಸದಸ್ಯರಾದ ಸಿದ್ಧಪ್ಪ ಗೊಡಚಿ, ಬಡೇಸಾಬ ದಾನಕಟಗಿ ಸೇರಿದಂತೆ ಹಲವರು ವಹಿಸಿದ್ದರು.