ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬಡತನ, ಸಂಕಷ್ಟಗಳು, ಅನಾನುಕೂಲತೆ ಇವುಗಳನ್ನು ಅನುಭವಿಸಿದವರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಮತ್ತು ಗುರಿ ಇಟ್ಟುಕೊಂಡವರು ಮಾತ್ರ ಸಾಧನೆ ಮಾಡಲು ಸಾಧ್ಯ. ಇವತ್ತು ನನ್ನ ಮತಕ್ಷೇತ್ರದ ಕರಿಯಪ್ಪ ಮಾದರ ಕೂಡ ಈ ಎಲ್ಲ ಸಂಕಷ್ಟಗಳನ್ನು ಅನುಭವಿಸಿ ಜಿಲ್ಲೆಯ ಹೆಸರು ತಂದಿದ್ದಾನೆ. ಅವನ ಪರಿಶ್ರಮ, ಸಾಧನೆ ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಸೋಮವಾರ ಪಟ್ಟಣದ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ 2024-25ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಕಲಿತ ವಿದ್ಯಾರ್ಥಿ ಕರಿಯಪ್ಪ ಮಾದರ ಐಐಟಿ ಮದ್ರಾಸ್ ಇನ್ಸ್ಟಿಟ್ಯೂಟ್‌ಗೆ ಆಯ್ಕೆಯಾದ ಪ್ರಯುಕ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕರಿಯಪ್ಪ ನನ್ನ ಮತಕ್ಷೇತ್ರದ ಹಾನಾಪೂರ ಎಸ್.ಪಿ. ಗ್ರಾಮದವನೆಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಕಾಲೇಜು, ಗ್ರಾಮ ಹಾಗೂ ನಮಗೂ ಕೀರ್ತಿ ತಂದಿದ್ದಾನೆ. ಅವನಿಗೂ, ಕಾಲೇಜಿನ ಶಿಕ್ಷಕರಿಗೂ ಅಭಿನಂದನೆ ಹೇಳಲು ಬಂದಿದ್ದೇನೆ. ಐಐಟಿ ಅಂದರೆನೇ ಗೊತ್ತಿಲ್ಲದ ತಾಯಿ ತನ್ನ ಮಗ ಐಐಟಿ ಸೇರುವಂತೆ ಮಾಡಿದ್ದಾಳೆ. ಅವನ ಪರಿಶ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ಈಗ ಈ ತಾಯಿಯ ಮಗ ಐಐಟಿಗೆ ಆಯ್ಕೆಯಾಗಿದ್ದಾನೆ. ಅವಳೂ ಸಹ ಇಲ್ಲಿ ಅಭಿನಂದನೆಗೆ ಅರ್ಹಳು. ಯಾರಿಗೆ ಬಡತನದ ಅರಿವು ಇರುತ್ತದೆಯೋ ಅವರು ಜೀವನದಲ್ಲಿ ಏನದರೂ ವಿಶೇಷ ಸಾಧನೆ ಮಾಡುತ್ತಾರೆ ಎನ್ನುವುದನ್ನು ನಾನು ನವೋದಯ ಶಾಲೆಯಲ್ಲಿ ಕಲಿಯುವಾಗಲೇ ನನ್ನ ಸಹಪಾಠಿಗಳಿಂದ ತಿಳಿದಿದ್ದೇನೆ. ಶ್ರೀಮಂತ ಮಕ್ಕಳಿಗೆ ಎಷ್ಟೇ ಅವಕಾಶಗಳಿದ್ದರೂ ಅವರು ಇಂತಹ ಸಾಧನೆ ಮಾಡುವುದು ಅಪರೂಪ. ನಾನು ನನ್ನ ಎರಡು ಮಕ್ಕಳಿಗೂ ಸಹ ಸಾಕಷ್ಟು ಸೌಲಭ್ಯ ನೀಡಿ ಕಲಿಸಬಹುದು. ಆದರೆ, ಅವರು ಇಂತಹ ಸಾಧನೆ ಮಾಡುತ್ತಾರೆಂಬುದು ಅಸಾಧ್ಯವಾ ಮಾತು. ಕಷ್ಟದ ಜೀವನಾನುಭವ ಸಾಧನೆಗೆ ಪೂರಕವಾಗುತ್ತದೆ ಎಂದರು. ವಿದ್ಯಾರ್ಥಿ ಕರಿಯಪ್ಪ ಮಾದರ ಮಾತನಾಡಿದರು. ಬಾಗಲಕೋಟೆಯ ಜಿಲ್ಲಾ ಪಪೂ (ಶಾಲಾ ಶಿಕ್ಷಣ) ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜಿನಿಂದ ಐಐಟಿ ಪಾಸಾದ ಪ್ರಥಮ ವಿದ್ಯಾರ್ಥಿ ಕರಿಯಪ್ಪ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ. ವಿದ್ಯಾರ್ಥಿಗಳು ತಮ್ಮ ಸುಪ್ತ ಗುಣಗಳನ್ನು ಬೆಳೆಸಿಕೊಂಡು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಗತಿ ಮಾಡಿದ ಉದಾಹರಣೆಗಳಿವೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಈತನ ಸಾಧನೆ ಹೆಮ್ಮೆ ಪಡುವಂತಹದ್ದು. ಸರ್ಕಾರ ಕಲಿಯಲು ಸಾಕಷ್ಟು ಸೌಲಭ್ಯ ಕೊಡುತ್ತಿದೆ. ಒಳ್ಳೆಯ ಪ್ರತಿಭೆಗಳು ಸರ್ಕಾರಿ ಶಾಲೆಗಳಲ್ಲಿ ಹುಟ್ಟುತ್ತಿವೆ. ದೇಶಕ್ಕೆ ಇವನು ಆಸ್ತಿಯಾಗಲಿ. ಕಾಲೇಜಿನ ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಯ ಪಾಲಕರಿಗೆ ನಾನು ಅಭಿನಂದಿಸುತ್ತೇನೆ. ಇಂತಹ ಇನ್ನೂ ಅನೇಕ ಪ್ರತಿಭೆಗಳು ಸರ್ಕಾರಿ ಶಾಲೆಗಳಿಂದ ಹೊರಬರಲಿ ಎಂದು ಹಾರೈಸಿದರು.ಕರಿಯಪ್ಪ ಮತ್ತು ಅವನ ತಾಯಿಯನ್ನು ಶಾಸಕರು ಸನ್ಮಾನಿಸಿದರು. ನಂತರ ಇಲಾಖೆಯಿಂದ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಸನ್ಮಾನಿಸಿದರು. ಗುತ್ತಿಗೆದಾರ ವೈ.ಬಿ.ಹಿರೇಗೌಡರ ಕರಿಯಪ್ಪನ ಶೈಕ್ಷಣಿಕ ಅನುಕೂಲಕ್ಕೆ ₹ 50 ಸಾವಿರ ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು. ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ವೈ.ಗೌಡರ ನಿರೂಪಿಸಿದರು.
ಕಾಲೇಜು ಆಡಳಿತ ಮಂಡಳಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಫಕೀರಪ್ಪ ತಳವಾರ, ರಮೇಶ ಹಿರೇಗೌಡರ, ರಾಜು ಸಂಗಮ, ಮೂಕಪ್ಪ ಹುನ್ನೂರ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.ಆರಂಭದಿಂದ ಪಿಯುಸಿ ವರೆಗೂ ಸರ್ಕಾರಿ ಶಾಲೆ, ಕಾಲೇಜಿನಲ್ಲಿಯೇ ನಾನು ಕಲಿತೆ. ಬಡತನದಲ್ಲಿ ಕಲಿತು ಈ ಮಟ್ಟಕ್ಕೆ ಬರಲು ನನ್ನ ತಾಯಿ, ಸಹೋದರರು, ಗುರುಗಳು ಕಾರಣ. ಅವರನ್ನೂ ಎಂದಿಗೂ ಮರೆಯಲಾರೆ. ಮುಂದೆ ಯುಪಿಎಸ್ಸಿ ಬರೆಯುವ ಆಸೆ ನನ್ನದಾಗಿದೆ.-ಕರಿಯಪ್ಪ ಮಾದರ ವಿದ್ಯಾರ್ಥಿ