ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಪೋಷಕರ ನೈತಿಕ ಹಾಗೂ ಭಾವನಾತ್ಮಕ ಬೆಂಬಲ ಅತ್ಯಂತ ಅಗತ್ಯ. ನಕಾರಾತ್ಮಕ ಚಿಂತನೆಗಳನ್ನು ದೂರವಿಟ್ಟು, ಓದಿನ ಕಡೆಗೆ ಸಂಪೂರ್ಣ ಗಮನ ಹರಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಪ್ರೊ–ವೈಸ್ ಚಾನ್ಸಲರ್ ಡಾ. ಶರತ್ ರಾವ್ ಹೇಳಿದರು.ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡಬೇಕು. ಆದರೆ ಅನವಶ್ಯಕವಾಗಿ ಒತ್ತಡ ಹೇರುವಂತಿಲ್ಲ. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಮನೋಭಾವವೂ ತಪ್ಪಬೇಕು ಎಂದರು.ಜ್ಞಾನಸುಧಾ ಸಂಸ್ಥೆಯು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಅನೇಕ ಇಂಜಿನಿಯರ್‌ಗಳು, ವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ರೂಪಿಸಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು; ಆದರೆ ಆ ಕನಸುಗಳನ್ನು ಮೀರಿಸುವ ಸಾಧನೆ ಮಾಡಬೇಕೆಂಬ ದೃಢ ಸಂಕಲ್ಪವೂ ಇರಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಜ್ಞಾನಸುಧಾ ವಿದ್ಯಾಸಂಸ್ಥೆ ಪರಿಶ್ರಮ ಮತ್ತು ಶಿಸ್ತು ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದೆ ಎಂದು ಪ್ರಶಂಸಿಸಿದರು. ಸಂಸ್ಥೆಯ ಸ್ಥಾಪಕ ಸುಧಾಕರ ಶೆಟ್ಟಿ ಅವರು ಕೇವಲ ಶಿಕ್ಷಣ ಪ್ರೇಮಿಯಷ್ಟೇ ಅಲ್ಲ, ಮಹಾನ್ ರಾಷ್ಟ್ರಪ್ರೇಮಿಯೂ ಹೌದು. ಜ್ಞಾನಸುಧಾ ಬರೀ ಕಟ್ಟಡಗಳ ಸಂಕೀರ್ಣವಲ್ಲ; ಇದು ಮೌಲ್ಯಗಳನ್ನು ಬಿತ್ತುವ, ಕನಸುಗಳನ್ನು ಬೆಳೆಸುವ ಮತ್ತು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಮೌಲ್ಯಾಧಾರಿತ ಶಿಕ್ಷಣ ನೀಡುವ ಕೇಂದ್ರವಾಗಿದೆ ಎಂದು ಹೇಳಿದರು.ಮೂಡುಬಿದ್ರಿಯ ಎಸ್.ಕೆ.ಎಫ್ ಚೇರ್‌ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಹಾಗೂ ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್, ಜ್ಞಾನಸುಧಾ ಹಾಗೂ ಐಐಟಿ ವಾರಣಾಸಿ ಸಂಸ್ಥೆಗಳ ಪೂರ್ವ ವಿದ್ಯಾರ್ಥಿ ಸಂಕೇತ್ ಜಿ.ಬಿ. ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡು, ಶ್ರಮ ಮತ್ತು ಶಿಸ್ತು ಯಶಸ್ಸಿನ ಮೂಲಮಂತ್ರಗಳೆಂದು ಹೇಳಿದರು.ಸಮಾರಂಭದಲ್ಲಿ ಎಂ.ಬಿ.ಬಿ.ಎಸ್ ಪ್ರವೇಶ ಪಡೆದ ವಿದ್ಯಾರ್ಥಿಗಳು, ಜೆ.ಇ.ಇ ಅಡ್ವಾನ್ಸ್ ಮತ್ತು ಜೆ.ಇ.ಇ ಮೈನ್ ಮೂಲಕ ಐಐಟಿ, ಐಐಎಸ್‌ಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್) ಹಾಗೂ ಎನ್‌ಐಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು, ಕೆ.ಸಿ.ಇ.ಟಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಸಾವಿರದೊಳಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದವರು, ಸಿ.ಎ. ಫೌಂಡೇಶನ್ ಹಾಗೂ ಸಿ.ಎ. ಅಂತಿಮ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳು, ಎನ್.ಡಿ.ಎ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ 227 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪರವಾಗಿ ಮೂರು ಲಕ್ಷ ನಲವತ್ತೆರಡು ಸಾವಿರ ರೂಪಾಯಿಗಳ ಚೆಕ್ಕನ್ನು ಭಾರತೀಯ ಸೇನೆಗೆ ಹಾಗೂ ಟೆಕ್ ವಾರ್ ಸಂಸ್ಥೆಗೆ ಒಂದು ಲಕ್ಷ ರೂಪಾಯಿಯನ್ನು ಹಸ್ತಾಂತರಿಸುವ ಮೂಲಕ ರಾಷ್ಟ್ರಸೇವೆಯ ಸಂದೇಶ ನೀಡಲಾಯಿತು.ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕ
ವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರೂಪಿಸಿ ವಂದನಾರ್ಪಣೆ ಮಾಡಿದರು.