ಸಾರಾಂಶ
ಅರಹತೊಳಲು ಕೆ.ರಂಗನಾಥ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಸಂಚಾರ ದಟ್ಟಣೆಗೆ ಅನುಗುಣವಾಗಿ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದ ಜನರಿಗೆ ರಸ್ತೆ ಉದ್ಘಾಟನೆಗೂ ಮುನ್ನವೇ ನಡೆದಿರುವ ಅಪಘಾತ ಆಘಾತ ತಂದಿದೆ.
ಪಟ್ಟಣದ ಬೈಪಾಸ್ ರಸ್ತೆಗೆ ಮೇಲ್ಸೇತುವೆ ಇಲ್ಲದ ಕಾರಣ ಈ ರಸ್ತೆ ಮೊದಲ ಬಲಿ ಪಡೆದಿದೆ. ಇದರಿಂದ ಜನರ ಕಣ್ಣಲ್ಲಿ ಭಯದ ಕಾರ್ಮೋಡ ಆವರಿಸಿದೆ. ಇದರೊಂದಿಗೆ ಮೇಲ್ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಯ ಕಿಚ್ಚು ಇನ್ನಷ್ಟು ಹೆಚ್ಚಾಗಿದೆ.ಹೊಳೆಹೊನ್ನೂರು ಪಟ್ಟಣ ಸುತ್ತಮುತ್ತಲ ಹಳ್ಳಿಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರ. ಇಷ್ಟು ವರ್ಷಗಳ ಕಾಲ ಕಿರಿದಾದ ರಸ್ತೆಗಳು, ಕಿರಿದಾದ ಹಳೆಯ ಭದ್ರಾನದಿ ಸೇತುವೆಯಿಂದ ಕಿರಿಕಿರಿ ಅನುಭವಿಸದ್ದ ಗ್ರಾಮಸ್ಥರು ಬೈಪಾಸ್ ರಸ್ತೆ ಮತ್ತು ಸುಸಜ್ಜಿತ ಹೊಸ ಸೇತುವೆಯ ಕನಸ್ಸು ಕಂಡಿದ್ದರು. ಅದಕ್ಕೆ ಪೂರಕವೆಂಬಂತೆ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಭದ್ರಾನದಿಗೆ ಹೊಸ ಸೇತುವೆ ಮತ್ತು 4-5 ಕಿಲೋಮೀಟರ್ ಸುಸಜ್ಜಿತವಾದ ಚತುಶ್ಪತ ರಸ್ತೆ ನಿರ್ಮಾಣಗೊಂಡು ಮುಕ್ತಾಯದ ಹಂತ ತಲುಪಿದೆ. ಆದರೆ ಎಮ್ಮೆಹಟ್ಟಿ ಸರ್ಕಲ್‌ನಲ್ಲಿ ಮೇಲ್ಸೇತುವೆ ಆಗದಿರುವುದು ಜನರ ನಿದ್ದೆಗೆಡಿಸಿದೆ.ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ:ಪಟ್ಟಣದ ಬೈಪಾಸ್ ರಸ್ತೆ ಹಾದು ಹೋಗುವ ಮಾರ್ಗದಲ್ಲಿ ಎರಡು ಪ್ರಮುಖ ರಸ್ತೆಗಳು ಬರುತ್ತವೆ. ಹೊಳೆಹೊನ್ನೂರಿನಿಂದ ಭದ್ರಾವತಿ ತಾಲೂಕು ಕೇಂದ್ರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮತ್ತು ಪಟ್ಟಣದಿಂದ ಹೊಳೆಬೆಳಗಲು ಗ್ರಾಮ ಸಂಪರ್ಕ ರಸ್ತೆ. ಈಗಾಗಲೇ ಹೊಳೆಬೆಳಗಲು ಗ್ರಾಮ ಸಂಪರ್ಕ ರಸ್ತೆಗೆ ಅಂಡರ್ ಪಾಸ್ ನಿರ್ಮಾಣ ಮಾಡಿದ್ದು, ಸಂಚಾರ ಸುಸೂತ್ರವಾಗಿ ನಡೆಯುತ್ತಿದೆ.ಆದರೆ ಪಟ್ಟಣದಿಂದ ಭದ್ರಾವತಿ ತಾಲೂಕು ಕೇಂದ್ರ ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಮಾತ್ರ ಯಾವುದೇ ಅಡೆತಡೆ ಇಲ್ಲದೆ ನೇರವಾಗಿ ಬೈಪಾಸ್ ಮೂಲಕವೇ ಹಾದು ಹೋಗಬೇಕಾಗಿದೆ. ಈ ರಸ್ತೆಯಲ್ಲಿ ಎಮ್ಮಹಟ್ಟಿ, ಅಗಸನಹಳ್ಳಿ, ದಾಸರ ಕಲ್ಲಹಳ್ಳಿ, ಕೆಕೆ ಮಗ್ಗಿ ಸೇರಿದಂತೆ ಹಲವಾರು ಹಳ್ಳಿಗಳು ಬರುತ್ತವೆ. ಪ್ರತೀ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದ ಕಾರಣ ಈ ಸರ್ಕಲ್‌ಗೆ ಮೇಲ್ಸೇತುವೆ ತುಂಬಾ ಅವಶ್ಯಕ ಎಂದು ಹಲವಾರು ಸಂಘಟನೆಗಳ ಮುಖಂಡರು ಮೊದಲೇ ಪ್ರತಿಭಟನೆ ಮಾಡಿ, ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಮೇಲ್ಸೇತುವೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.ನಾಲ್ಕೇ ದಿನಕ್ಕೆ ಬೈಪಾಸ್ ರಸ್ತೆ ಬಂದ್
ಪಟ್ಟಣದ ಬೈಪಾಸ್ ರಸ್ತೆ ಇನ್ನೇನು ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗುವ ಲಕ್ಷಣಗಳು ಕಂಡುಬಂದಿದ್ದವು. ಆದ್ದರಿಂದ ಪ್ರಾಯೋಗಿಕವಾಗಿ ಚತುಶ್ಪತ ರಸ್ತೆಯ ಒಂದು ಭಾಗದಲ್ಲಿ ಈ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಎಮ್ಮೆಹಟ್ಟಿ ಹೊಳೆಹೊನ್ನೂರು ಸರ್ಕಲ್‌ನಲ್ಲಿ ಅಪಘಾತ ಸಂಭವಿಸಿ ಪಟ್ಟಣದ ಪುಟ್ಟರಾಜು ಎಂಬ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಯ ಮಣ್ಣನ್ನು ಅಗಿದು ಸಂಚಾರವನ್ನು ಬಂದ್ ಮಾಡಲಾಗಿದೆ.ಮೇಲ್ಸೇತುವೆ ಆಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಕ್ಷಣ ಸರ್ಕಾರಕ್ಕೆ ಪ್ರಪೋಸಲ್ ಕಳಿಸುತ್ತೇನೆ. ಅಲ್ಲಿಯವರೆಗೂ ಬೈಪಾಸ್ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಸಂಚರಿದಂತೆ ರಸ್ತೆಗೆ ಹಂಪ್ಸ್ ಹಾಕಲಾಗುವುದು. ಜೊತೆಗೆ ಬ್ಯಾರಿಕೇಡ್‌ಗಳನ್ನು ಹಾಕಿಸಿ ವಾಹನಗಳ ವೇಗವನ್ನು ತಗ್ಗಿಸುವಂತೆ ಮಾಡಲು ಬೇಕಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
- ಬಿ.ವೈ.ರಾಘವೇಂದ್ರ, ಸಂಸದರು ಶಿವಮೊಗ್ಗ.ಹೊಳೆಹೊನ್ನೂರಿಂದ ಭದ್ರಾವತಿಗೆ ಹೋಗುವ ರಸ್ತೆಯಲ್ಲಿ ಮೇಲ್ಸೇತುವೆ ಆಗಲೇಬೇಕು. ಮೊನ್ನೆ ನಡೆದ ಅಪಘಾತದಿಂದ ಸುತ್ತಮುತ್ತಲಿನ ಜನರು ಆತಂಕದಲ್ಲೇ ವಾಹನ ಸಂಚಾರ ನಡೆಸುವಂತಾಗಿದೆ.
- ಸಚಿನ್ ಸಿಂಧೆ, ಎಮ್ಮೆಹಟ್ಟಿ, ನಿವಾಸಿ.