ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ 2025-26ನೇ ವರ್ಷದ ವಾರ್ಷಿಕ ಹಣಕಾಸು ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, 1,310.50 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ. ಬ್ಯಾಂಕ್‌ನ ಒಟ್ಟು ವ್ಯವಹಾರವೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,92,118.67 ಕೋಟಿ ರು.ಗೆ ಏರಿಕೆಯಾಗಿದೆ.

ಮಂಗಳೂರಿನಲ್ಲಿ ಮಂಗಳವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ 2026ರ ಮಾ. 31ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳಿಗೆ ಅನುಮೋದನೆ ನೀಡಲಾಯಿತು. ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶೇ.50 ಲಾಭಾಂಶ ವಿತರಣೆ ಮಾಡಲು ಮಂಡಳಿ ಶಿಫಾರಸು ಮಾಡಿದೆ.

ಬ್ಯಾಂಕಿನ ಒಟ್ಟು ಠೇವಣಿಗಳು 1,08,778.75 ಕೋಟಿ ರು.ಗೆ ಏರಿಕೆಯಾಗಿದ್ದು, ಕಾಸಾ ಠೇವಣಿಗಳು ಶೇ.11 ಹೆಚ್ಚಳವಾಗಿ 36,559.66 ಕೋಟಿ ರು.ಗೆ ತಲುಪಿವೆ. ಕಾಸಾ ಅನುಪಾತ ಶೇ. 33.61ಕ್ಕೆ ಏರಿಕೆಯಾಗಿದೆ.

ಒಟ್ಟು ಮುಂಗಡಗಳು 83,339.92 ಕೋಟಿ ರು.ಗೆ ಏರಿಕೆಯಾಗಿದ್ದು, ತ್ರೈಮಾಸಿಕ ಅವಧಿಯಲ್ಲಿ ಶೇ. 8 ಬೆಳವಣಿಗೆ ದಾಖಲಿಸಿದೆ. ಬ್ಯಾಂಕಿನ ಎನ್‌ಐಎಂ ಶೇ. 2.92ರಿಂದ ಶೇ. 3.07ಕ್ಕೆ ಏರಿಕೆಯಾಗಿ 15 ಬೇಸಿಸ್ ಪಾಯಿಂಟ್ ಹೆಚ್ಚಳ ಕಂಡಿದೆ.


2026ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಬ್ಯಾಂಕ್ 408.19 ಕೋಟಿ ರು. ನಿಖರ ಲಾಭ ಗಳಿಸಿದ್ದು, ಹಿಂದಿನ ತ್ರೈಮಾಸಿಕದ 290.79 ಕೋಟಿ ರು.ಗೆ ಹೋಲಿಸಿದರೆ ಶೇ.40 ಏರಿಕೆಯಾಗಿದೆ. ಆಸ್ತಿ ಗುಣಮಟ್ಟದಲ್ಲಿಯೂ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಜಿಎನ್‌ಪಿಎ ಶೇ. 3.32 ರಿಂದ ಶೇ. 2.78ಕ್ಕೆ ಮತ್ತು ಎನ್‌ಎನ್‌ಪಿಎ ಶೇ. 1.31 ರಿಂದ ಶೇ. 0.98ಕ್ಕೆ ಇಳಿಕೆಯಾಗಿದೆ.-ಕೋಟ್‌-

ಬ್ಯಾಂಕಿನ ಸ್ಥಿರ ವ್ಯವಹಾರ ಮಾದರಿ, ತಂತ್ರಜ್ಞಾನ ಆಧಾರಿತ ಕಾರ್ಯಕ್ಷಮತೆ ಹಾಗೂ ಗುಣಮಟ್ಟದ ಸಾಲ ವಿತರಣೆಯೇ ಈ ಸಾಧನೆಗೆ ಕಾರಣವಾಗಿದೆ.

- ರಾಘವೇಂದ್ರ ಭಟ್, ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ