- ಬಿಎಸ್‌ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ ನೇತೃತ್ವದಲ್ಲಿ ಸಂಘ ಸಂಸ್ಥೆಗಳಿಂದ ರಸ್ತೆ ತಡೆ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಕೆಳಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಮಾತನಾಡಿ, ಈ ಹಿಂದೆಯೇ ಆಗಬೇಕಿದ್ದ ಕಾಮಗಾರಿ ಮಾಡದಿರುವುದರಿಂದ ನಗರದ ಜನತೆ ಪ್ರತಿ ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. 10 ನಿಮಿಷ ಮಳೆ ಬಂದರೂ 2 ಗಂಟೆ ವಾಹನ ಸಂಚಾರ ನಿಲ್ಲುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಹೆದ್ದಾರಿ ಆಗಿರುವುದರಿಂದ ದಿನಕ್ಕೆ 20 ಸಾವಿರಕ್ಕೂ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇದೆ. ದಾವಣಗೆರೆ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ಶಾಲಾ, ಕಾಲೇಜುಗಳಿಗೆ ನಿತ್ಯ 5 ಸಾವಿರ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ. ಸೇತುವೆ ಮಧ್ಯ ಭಾಗದ ರಸ್ತೆ ಗುಂಡಿಮಯವಾಗಿದೆ. ಇಲ್ಲಿ ಸಂಚರಿಸುವವರು ಅಪಘಾತಗಳಲ್ಲಿ ಕೈ, ಕಾಲು ಮುರಿದುಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗದಿರುವುದು ಹರಿಹರ ಜನತೆಯ ದುರಂತ ಎಂದು ಟೀಕಿಸಿದರು.
ಸ್ಥಳಕ್ಕೆ ಆಗಮಿಸಿದ್ದ ನಗರಸಭೆ ಎಇಇ ವಿನಯ್ ಕುಮಾರ್ ಅವರು, ಸೇತುವೆ ಮಧ್ಯ ಭಾಗದಲ್ಲಿರುವ ಚರಂಡಿಯು ಹಲವು ದಶಕಗಳ ಹಿಂದೆ ರಚಿಸಿದ್ದು, ಕಿರಿದಾಗಿದೆ. ಅಲ್ಲಿ ಹೊಸದಾಗಿ ದೊಡ್ಡ ಗಾತ್ರದ ಚರಂಡಿ ನಿರ್ಮಿಸಿದರೆ ಮಳೆನೀರು ಹಾಗೂ ಇತರೆ ತ್ಯಾಜ್ಯ ಸರಾಗವಾಗಿ ಹರಿಯುತ್ತದೆ ಎಂದರು.
ಆಗ ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ಮಾತನಾಡಿ, ನೆಲದಾಳದಲ್ಲಿ ಹೊಸ ಚರಂಡಿ ನಿರ್ಮಾಣಕ್ಕೆ ₹40 ರಿಂದ ₹50 ಲಕ್ಷದವರೆಗೆ ಅನುದಾನ ಬೇಕು. ಕಾಮಗಾರಿ ನಡೆಸಲು ತಿಂಗಳು ಕಾಲ ವಾಹನ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ ಎಂದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಮಾತನಾಡಿ, ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯವರು ಸೇರಿಕೊಂಡು ಮೇ 25ರೊಳಗೆ ಸಮಸ್ಯೆ ಪರಿಹರಿಸದಿದ್ದರೆ, ಮತ್ತೆ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ,ಸಂಸ್ಥೆಗಳ ಪದಾಧಿಕಾರಿಗಳಾದ ಐರಣಿ ಹನುಮಂತಪ್ಪ, ಆರ್.ಶ್ರೀನಿವಾಸ್, ಜಬೀಉಲ್ಲಾ, ಆನಂದ್ ಕುಮಾರ್ ಎಂ.ಆರ್., ಅನಿಲ್, ರವಿ, ಸಂತೋಷ್, ಅವಿನಾಶ್, ಬೆನಕೇಶ, ಮಂಜುನಾಥ್ ನಡುವಲಕೇರಿ, ಸಂತೋಷ್ ನೋಟದವರ್, ಸೈಯದ್ ಸಲೀಂ ನಾಲಬಂದ್ ಹಾಗೂ ಇತರರಿದ್ದರು.- - -
-18HRR.02:ಹರಿಹರದ ಹರಪನಹಳ್ಳಿ ಹೆದ್ದಾರಿ ರೈಲ್ವೆ ಕೆಳಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.