ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಗುಡಿ: ಡಾ. ಮಹೇಶ ವಾಳ್ವೇಕರ

| Published : Nov 10 2025, 01:30 AM IST

ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಗುಡಿ: ಡಾ. ಮಹೇಶ ವಾಳ್ವೇಕರ
Share this Article
  • FB
  • TW
  • Linkdin
  • Email

ಸಾರಾಂಶ

ಕವಿವ ಸಂಘ ಕನ್ನಡ ಭಾಷೆ, ನೆಲ, ಗಡಿ ವಿಷಯದಲ್ಲಿ ಅನ್ಯಾಯವಾದಾಗ ಕನ್ನಡಪರ ಧ್ವನಿ ಎತ್ತಿ ಕನ್ನಡಿಗರಿಗೆ ನ್ಯಾಯ ಒದಗಿಸಿದ್ದು, ಕನ್ನಡಿಗರಾದ ನಾವು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಉದಾಸೀನ ಮನೋಭಾವ ಹೊಂದಬಾರದು ಎಂದು ಡಾ. ಮಹೇಶ ವಾಳ್ವೇಕರ ಹೇಳಿದರು.

ಧಾರವಾಡ: ಕನ್ನಡದ ಗುಡಿ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಬೇರನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಈ ಸಂಘ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತ ಡಾ. ಮಹೇಶ ವಾಳ್ವೇಕರ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘ 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕವಿವ ಸಂಘ ಕನ್ನಡ ಭಾಷೆ, ನೆಲ, ಗಡಿ ವಿಷಯದಲ್ಲಿ ಅನ್ಯಾಯವಾದಾಗ ಕನ್ನಡಪರ ಧ್ವನಿ ಎತ್ತಿ ಕನ್ನಡಿಗರಿಗೆ ನ್ಯಾಯ ಒದಗಿಸಿದ್ದು, ಕನ್ನಡಿಗರಾದ ನಾವು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಉದಾಸೀನ ಮನೋಭಾವ ಹೊಂದಬಾರದು. ರಾಜಧಾನಿ ಬೆಂಗಳೂರಲ್ಲಿ ಕನ್ನಡಿಗರ ಸಂಖ್ಯೆಯೇ ಶೇ. 21. ಆದರೆ, ಅನ್ಯ ಭಾಷಿಕರ ಸಂಖ್ಯೆ ಶೇ. 79 ಕನ್ನಡದ ನೆಲದಲ್ಲಿ ಕನ್ನಡಿಗರ ಮನಸ್ಸು ಒಂದಾಗಬೇಕು ಎಂದರು.

ಕವಿವ ಸಂಘ ದಕ್ಷಿಣ ಕರ್ನಾಟಕದ ಕಡೆ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಬೇಕು. ಅಂದಾಗ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಸಾರ್ವಜನಿಕರು ಸರ್ಕಾರದ ಯೋಜನೆ, ರೂಪರೇಷೆಗಳ ಪೂರಕ ಅಭಿವೃದ್ದಿಗೆ ಸಂಬಂಧ ಪಟ್ಟಂತಹ ಮಾಹಿತಿ ಕೇಳಿದಾಗ ಮಾಹಿತಿ ಆಯುಕ್ತರಾಗಿ ತಾವು ಸಾರ್ವಜನಿಕರ ಹಾಗೂ ಸರ್ಕಾರದ ನಡುವೆ ಸಮನ್ವಯತೆಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.ಹು-ಧಾ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಮಾತನಾಡಿ, ಕನ್ನಡ ಶಕ್ತಿಯುತ ಭಾಷೆ. ಭಾಷೆಯ ಉಳಿವಿಗಾಗಿ ನಾವೆಲ್ಲ ಶಕ್ತಿಶಾಲಿಗಳಾಗಿ ದುಡಿಯಬೇಕು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಉದಾತ ಭಾವನೆ ಸಾಕಾರಗೊಳಿಸಲು ಯುವಕರು ಶ್ರದ್ಧೆ ಪೂರ್ವಕ ಕಾರ‍್ಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 534ನೇ ಜಯಂತಿ ಪ್ರಯುಕ್ತ ಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ಸದಾಶಿವ ಐಹೊಳೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಸಾದ ಮಡಿವಾಳರ ತಬಲಾ ಸಾಥ್ ನೀಡಿದರು.

ಸೀತಾ ಛಪ್ಪರ ನೇತೃತ್ವದ ಅಭಿವ್ಯಕ್ತಿ ಕಲಾ ತಂಡದಿಂದ ನೃತ್ಯ ರೂಪಕ ಹಾಗೂ ಭರತ ನಾಟ್ಯ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವೇದಿಕೆಯಲ್ಲಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಸತೀಶ ತುರಮರಿ ಸನ್ಮಾನ ಪತ್ರ ಓದಿದರು.

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಚಿದಾನಂದ ಮನ್ಸೂರ, ಎಸ್.ಬಿ. ಕೊಡ್ಲಿ, ಗಿರೀಶ ಪದಕಿ, ಬೆಂಗೇರಿ, ಎಂ.ಎಂ.ಚಿಕ್ಕಮಠ, ಡಾ.ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಶಿವಾನಂದ ಹೂಗಾರ ಸೇರಿದಂತೆ ಮುಂತಾದವರಿದ್ದರು.