ಸಾರಾಂಶ
ಗದಗ: ಕರ್ನಾಟಕದಲ್ಲಿ ಇರುವ ವೈವಿಧ್ಯಮಯ ಸ್ಮಾರಕಗಳು ಎಲ್ಲಿಯೂ ಕಂಡುಬರುವುದಿಲ್ಲ. ಹಾಗಾಗಿ ಕರ್ನಾಟಕ ವಾಸ್ತುಶಿಲ್ಪಗಳ ತೊಟ್ಟಿಲು ಹಾಗೂ ಪ್ರಯೋಗಾಲಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶನಿವಾರ ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಜರುಗಿದ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅತಿಹೆಚ್ಚು ವಾಸ್ತುಶಿಲ್ಪಗಳಿದ್ದು, ಇಲ್ಲಿರುವ ಒಂದೊಂದು ಕಲ್ಲೂ ಒಂದೊಂದು ಇತಿಹಾಸ ಹೇಳುತ್ತವೆ. ಲಕ್ಕುಂಡಿಯಲ್ಲಿ 101 ಬಾವಿ 101 ಗುಡಿಗಳಿದ್ದು, ಲಕ್ಕುಂಡಿ ಪ್ರಾಧಿಕಾರದ ಸಹಯೋಗದಲ್ಲಿ ಉತ್ಖನನ ಕಾರ್ಯ ಹಮ್ಮಿಕೊಂಡು ಹುದುಗಿಹೋದ ಶಾಸನ, ಕಲಾಕೃತಿಗಳನ್ನು ಸಂಗ್ರಹಿಸಿ ತೆರೆದ ಮೈದಾನದಲ್ಲಿ ಇಡಲಾಗಿದೆ.ಗದಗ ಜಿಲ್ಲೆ ನಯಸೇನ, ಭೀಮಸೇನ ಜೋಶಿ, ಕುಮಾರವ್ಯಾಸ, ಹುಯಿಲಗೋಳ ನಾರಾಯಣ, ಕೆ.ಎಚ್. ಪಾಟೀಲ ಅವರಂತಹ ಅನೇಕ ಸಾಧಕರು ಜನಿಸಿ ಜಿಲ್ಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಹಾಗಾಗಿ ಇತಿಹಾಸಕಾರರು ಗದಗ ಜಿಲ್ಲೆಯ ಪ್ರಾಮುಖ್ಯ ತಿಳಿಯಬೇಕು. ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ಮತ್ತು ಮಲಪ್ರಭಾ ನದಿಯ ದಂಡೆಗಳು ಪ್ರಾಚೀನ ಕಾಲದಲ್ಲಿಯೇ ನಾಗರಿಕತೆಯನ್ನು ಹುಟ್ಟುಹಾಕಿವೆ. ಈ ನೆಲದಲ್ಲಿ ಅನೇಕ ಕುರುಹುಗಳು ಕಂಡುಬಂದಿವೆ ಎಂದರು.ಕರ್ನಾಟಕದಲ್ಲಿರುವ ಪ್ರಾಚ್ಯಾವಶೇಷಗಳ ಕುರಿತು ಸಂಪೂರ್ಣ ಸಮೀಕ್ಷೆ ಮಾಡುವ ಕೆಲಸ ಆರಂಭಿಸಲಾಗಿದೆ. ಸ್ಮಾರಕ ದತ್ತು ಯೋಜನೆಯಡಿಯಲ್ಲಿ ಇತಿಹಾಸಕಾರರು ಆಸಕ್ತಿ ವಹಿಸಿ ರಾಜ್ಯದ 119 ತಾಲೂಕುಗಳಲ್ಲಿ ಸರ್ವೇ ಮಾಡಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು. ಆನಂತರ ಡಿಜಿಟಲಿಕರಣಗೊಳಿಸಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ರಾಜಾರಾಮ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದ ಐತಿಹಾಸಿಕ ಸ್ಥಳಗಳಲ್ಲಿ ಹುದುಗಿಹೋದ ಪ್ರಾಚ್ಯಾವಶೇಷಗಳ ಉತ್ಖನನ ಕಾರ್ಯ ಮಾಡಿ ಸಂಶೋಧನೆ ಮಾಡಲು ನಿಟ್ಟಿನಲ್ಲಿ ಸರ್ವೆ ಕಾರ್ಯವನ್ನು ಲಕ್ಕುಂಡಿಯಲ್ಲಿ ಮಾಡಿದ ಸಚಿವರು ಇತಿಹಾಸಕಾರರಿಗೆ ಸ್ಫೂರ್ತಿ ಆಗಿದ್ದಾರೆ ಮತ್ತು ಇತಿಹಾಸ ಬಗ್ಗೆ ಅವರ ಕಾಳಜಿ ನಮ್ಮೆಲ್ಲರಿಗೂ ಧೈರ್ಯ ತುಂಬಿದೆ. ಸಚಿವರ ಆಶಯದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಸರ್ವೇ ಕೈಗೊಂಡು ಮಾಹಿತಿಯನ್ನು ಕಲೆಹಾಕಲು ಇದು ಸುವರ್ಣ ಕ್ಷಣವಾಗಿದೆ ಎಂದರು.ಸಮಾರಂಭದಲ್ಲಿ ಇತಿಹಾಸ ತಜ್ಞ ಡಾ. ಶ್ರೀನಿವಾಸ ಪಾಡಿಗಾರ, ಡಾ. ಕೆ. ವಸಂತಲಕ್ಷ್ಮೀ, ಡಾ. ಎಸ್. ನಾಗರಾಜಪ್ಪ, ಡಾ. ಮಲ್ಲಿಕಾರ್ಜುನ ಕುಂಬಾರ, ಡಾ. ಶರಣಬಸಪ್ಪ ಕೋಲ್ಕಾರ, ಡಾ. ರಮೇಶ ನಾಯಕ, ಡಾ. ಪದ್ಮಜಾ ದೇಸಾಯಿ, ಶಾಶ್ವತಸ್ವಾಮಿ ಮುಕ್ಕುಂದಿಮಠ, ಡಾ. ಎಂ. ಕೊಟ್ರೇಶ್, ಮಹಾದೇವ ಜಗತಾಪ, ಡಾ. ಎ.ಒ. ನರಸಿಂಹಮೂರ್ತಿ, ಒವನ್ ಮೌರ್ಯ ಚಕ್ರವರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಮುಲ್ಲಾ ಪ್ರಾಸ್ತಾವಿಕಾವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸತಜ್ಞ ಡಾ. ಲಕ್ಷ್ಮಣ ತೆಲಗಾವಿ, ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ನಾಡಗೌಡರ, ಶರಣು ಗೋಗೇರಿ, ಡಾ. ದೇವರಕೊಂಡಾರೆಡ್ಡಿ ಇದ್ದರು. ದತ್ತ ಪ್ರಸನ್ನ ಪಾಟೀಲ ನಿರೂಪಿಸಿದರು.
;Resize=(128,128))