ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ (ವಿಜಯನಗರ)
ರಾಜ್ಯದಲ್ಲಿ ಈಗ 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಿದ್ದು, ಮುಂದೆ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡುವ ಗುರಿ ಇದ್ದು, ಯೋಜನೆ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ₹870 ಕೋಟಿ ಮೊತ್ತದಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ನೀರಾವರಿ ಯೋಜನೆಗೆ ಈ ಹಿಂದೆಯೇ ಚಾಲನೆ ನೀಡಿದ್ದು, ಈಗ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಒತ್ತು ನೀಡಿರುವೆ ಎಂದರು.
ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ, ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಇವರ ಸುಳ್ಳಿಗೆ ಬಲಿಯಾಗದಿರಿ. ನಮ್ಮ ಸರ್ಕಾರ ದಿವಾಳಿ ಆಗಿಲ್ಲ. ಆಗಿದ್ದರೆ, ಇಷ್ಟೊಂದು ಅಭಿವೃದ್ಧಿ ಕೆಲಸ ಆಗುತ್ತಿತ್ತಾ? ಎಂದು ಪ್ರಶ್ನಿಸಿದರು.ಮತಗಳ್ಳರು ರಾಜೀನಾಮೆ ಕೊಡಲಿ:ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಮತಗಳ್ಳತನದಿಂದ, ಪ್ರಧಾನಿ ಮೋದಿ ಸೇರಿ ಕೇಂದ್ರ ಸರ್ಕಾರದ ಸಚಿವರು ರಾಜೀನಾಮೆ ಕೊಡಲಿ. ಮಹಾರಾಷ್ಟ್ರ, ಹರಿಯಾಣ, ದೆಹಲಿ, ಕರ್ನಾಟಕ, ಈಗ ಬಿಹಾರದಲ್ಲೂ ಬಿಜೆಪಿಯವರು ಮತಗಳ್ಳತನ ಮಾಡಿದ್ದಾರೆ. ಅಧಿಕಾರಕ್ಕಾಗಿ ಮತಗಳ್ಳತನ ಮಾಡುವ ಇಂತಹ ಭಂಡರನ್ನು ನಾವು ಎಂದಿಗೂ ನೋಡಿಲ್ಲ. ದೆಹಲಿಯಲ್ಲಿ ಮತ ಹಾಕಿದವರೂ ಈಗ ಬಿಹಾರದಲ್ಲೂ ಮತ ಚಲಾಯಿಸಿದ್ದಾರೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಕೂಡ್ಲಿಗಿಯ 1 ಲಕ್ಷ 70 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸುವ ಜತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಕೆರೆ ತುಂಬಿಸುವ ಯೋಜನೆ ಸಹಕಾರಿ ಆಗಲಿದೆ. ನಮ್ಮದು ಅಭಿವೃದ್ಧಿ ಪರವಾದ, ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ 2 ವರ್ಷಗಳಲ್ಲಿ ಕೂಡ್ಲಿಗಿಗೆ ₹1250 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದಿದ್ದು ಜೋಶಿ:ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಎರಡನ್ನೂ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ರೈತರ ಹಿತ ಕಾಪಾಡಿದೆ ಎಂದರು.ಎರಡೂವರೆ ವರ್ಷಕ್ಕೆ 10 ದಿನ ಬಾಕಿ:ಇನ್ನು ಎರಡೂವರೆ ವರ್ಷ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಎರಡೂವರೆ ವರ್ಷಕ್ಕೆ ಇನ್ನು 10 ದಿನಗಳು ಬಾಕಿ ಇವೆ. ಆಗಲೇ ಎನ್.ಟಿ.ಶ್ರೀನಿವಾಸ್ ₹1250 ಕೋಟಿ ಕ್ಷೇತ್ರಕ್ಕೆ ತಂದಿದ್ದಾರೆ. ಇನ್ನು ಮುಂದೆ ತರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಎನ್.ಎಸ್. ಬೋಸರಾಜು, ಜಮೀರ್ ಅಹ್ಮದ್ ಖಾನ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಎನ್.ಟಿ.ಶ್ರೀನಿವಾಸ್, ಎನ್.ವೈ. ಗೋಪಾಲಕೃಷ್ಣ, ಬಿ.ಎಂ.ನಾಗರಾಜ, ಲತಾ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಟಿ.ರಘುಮೂರ್ತಿ, ಬಸವಂತಪ್ಪ, ಸಂಸದ ಇ.ತುಕಾರಾಂ ಇದ್ದರು.
;Resize=(128,128))