ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಬಹುದು. ಈಗ 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಿದ್ದೇವೆ. ಮುಂದೆ ಇನ್ನು ನೀರಾವರಿ ಯೋಜನೆ ಕೈಗೊಳ್ಳಲಾಗುವುದು. ಕೂಡ್ಲಿಗಿಯಲ್ಲಿ 74 ಕೆರೆ ತುಂಬಿಸುವ ಯೋಜನೆ ಸಾಕಾರಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ₹870 ಕೋಟಿ ಮೊತ್ತದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ, ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನೀರು ಹನಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ನೀರಾವರಿ ಯೋಜನೆಗೆ ಈ ಹಿಂದೆಯೇ ಚಾಲನೆ ನೀಡಿರುವೆ. ಈಗ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಒತ್ತು ನೀಡಿರುವೆ. ಕೂಡ್ಲಿಗಿಗೆ ₹1250 ಕೋಟಿ ಅನುದಾನ ಒದಗಿಸಿರುವೆ ಎಂದರು.ಮತಗಳ್ಳರು, ರಾಜೀನಾಮೆ ಕೊಡಲಿ:
ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಮತಗಳ್ಳತನದಿಂದ, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರ್ಕಾರದ ಸಚಿವರು ರಾಜೀನಾಮೆ ಕೊಡಲಿ. ಮಹಾರಾಷ್ಟ್ರ, ಹರಿಯಾಣ, ದಿಲ್ಲಿ, ಕರ್ನಾಟಕ, ಈಗ ಬಿಹಾರದಲ್ಲೂ ಬಿಜೆಪಿಯವರು ಮತಗಳ್ಳತನ ಮಾಡಿದ್ದಾರೆ. ಅಧಿಕಾರಕ್ಕಾಗಿ ಮತಗಳ್ಳತನ ಮಾಡುವ ಇಂತಹ ಭಂಡರನ್ನು ನಾವು ಎಂದಿಗೂ ನೋಡಿಲ್ಲ. ದಿಲ್ಲಿಯಲ್ಲಿ ಮತ ಹಾಕಿದವರೂ ಈಗ ಬಿಹಾರದಲ್ಲೂ ಮತ ಚಲಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.1 ಲಕ್ಷ 70 ಸಾವಿರ ಜನರಿಗೆ ಅನುಕೂಲ:
ಕೂಡ್ಲಿಗಿಯ 1 ಲಕ್ಷ 70 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸುವ ಜತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಕೆರೆ ತುಂಬಿಸುವ ಯೋಜನೆ ಸಹಕಾರಿ ಆಗಲಿದೆ. ಬರಡು ನೆಲ ಕೂಡ್ಲಿಗಿಯನ್ನು ಹಸಿರು ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಎನ್.ಟಿ. ಶ್ರೀನಿವಾಸ್ ಅತ್ಯಂತ ಕ್ರಿಯಾಶೀಲರು ಎಂದರು.ನಮ್ಮದು ಅಭಿವೃದ್ಧಿ ಪರವಾದ, ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ₹1250 ಕೋಟಿಗೂ ಅಧಿಕ ಮೊತ್ತದ ಹಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜತೆಗೆ ಚುನಾವಣೆ ವೇಳೆ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತಿ ತಿಂಗಳು ಸರ್ಕಾರದ ಗ್ಯಾರಂಟಿಗಳು ತಲುಪುತ್ತಿವೆ. 1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಮತ್ತು ಗೃಹಜ್ಯೋತಿಯ ಸವಲತ್ತು ತಲುಪುತ್ತಿದೆ. ಎರಡು ವರ್ಷದಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರು.ನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ ಎಂದರು.
ಬಿಜೆಪಿಯವರಿಗೆ ಸುಳ್ಳೇ ಮನೆದೇವರು:ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ, ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಇವರ ಸುಳ್ಳಿಗೆ ಬಲಿಯಾಗದಿರಿ. ನಮ್ಮ ಸರ್ಕಾರ ದಿವಾಳಿ ಆಗಿಲ್ಲ. ಆಗಿದ್ದರೆ, ಇಷ್ಟೊಂದು ಅಭಿವೃದ್ಧಿ ಕೆಲಸ ಆಗುತ್ತಿತ್ತಾ? ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದಿದ್ದು ಪ್ರಹ್ಲಾದ್ ಜೋಶಿ:ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಎರಡನ್ನೂ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡಿದ್ದಾರೆ. ಯಡಿಯೂರಪ್ಪ ಅವರ ಮಗನೆಂದು ಹೇಳಿ ಹೋಗಿರುವೆ ಎಂದು ಹೇಳಿದರು. ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಯಿತು. ನಾವು ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ ಮಾಡಿದ್ದೇವೆ. ಸರ್ಕಾರ ₹50 ಕೊಟ್ಟರೆ, ಸಕ್ಕರೆ ಕಾರ್ಖಾನೆ ಮಾಲೀಕರು ₹50 ಕೊಡಲಿದ್ದಾರೆ. ಸಮಸ್ಯೆ ಇತ್ಯರ್ಥ ಮಾಡಿರುವೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ಕಾಪಾಡಿದೆ ಎಂದರು.
ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್, ಸಂಸದ ಈ. ತುಕಾರಾಂ ಇಬ್ಬರೂ ಜನರ ಅಭಿವೃದ್ಧಿ ಬಯಸುತ್ತಾರೆ. ಇವರಿಬ್ಬರನ್ನು ಗೆಲ್ಲಿಸಿದ ಜನತೆಗೆ ನಾನು ಧನ್ಯವಾದ ತಿಳಿಸುವೆ. ಈ ಶಾಸಕರು, ಸಂಸದರು ನಿಮ್ಮ ಆಸ್ತಿ ಇದ್ದ ಹಾಗೆ. ಇವರನ್ನು ಕಾಪಾಡಿಕೊಳ್ಳಿ ಎಂದರು.ಇನ್ನು ಎರಡೂವರೆ ವರ್ಷ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಎರಡೂವರೆ ವರ್ಷಕ್ಕೆ ಇನ್ನು ಹತ್ತು ದಿನಗಳು ಬಾಕಿ ಇವೆ. ಆಗಲೇ ಎನ್.ಟಿ. ಶ್ರೀನಿವಾಸ್ ₹1250 ಕೋಟಿ ಕ್ಷೇತ್ರಕ್ಕೆ ತಂದಿದ್ದಾರೆ. ಇನ್ನು ಮುಂದೆ ತರಲಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಎನ್. ಎಸ್. ಬೋಸರಾಜು, ಜಮೀರ್ ಅಹಮದ್ ಖಾನ್, ಡಾ. ಎಂ.ಸಿ. ಸುಧಾಕರ, ಶಾಸಕರಾದ ಎನ್.ಟಿ. ಶ್ರೀನಿವಾಸ್, ಎನ್.ವೈ. ಗೋಪಾಲಕೃಷ್ಣ, ಬಿ.ಎಂ. ನಾಗರಾಜ, ಲತಾ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಟಿ. ರಘುಮೂರ್ತಿ, ಬಸವಂತಪ್ಪ, ಮಾಜಿ ಸಚಿವರಾದ ಎಚ್. ಆಂಜನೇಯ, ಅಲ್ಲಂ ವೀರಭದ್ರಪ್ಪ, ಸಂಸದ ಈ. ತುಕಾರಾಂ ಮತ್ತಿತರರಿದ್ದರು.;Resize=(128,128))