ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಅಂಗನವಾಡಿ ಮಕ್ಕಳು ಹಾಗೂ ತಾಯಂದಿರರು ಅಪೌಷ್ಟಿಕತೆಯಿಂದ ಬಳಲುಬಾರದು ಎಂಬ ಸದುದ್ದೇಶದಿಂದ ಸರ್ಕಾರ ಹಲವು ಯೋಜನೆಗಳು ಜಾರಿಗೆ ತಂದಿದ್ದು, ತಾಯಂದಿರರು ಹಾಗೂ ಗರ್ಭಿಣಿಯರು ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಲಸಿಕೆ ಹಾಕಿಸಬೇಕು .ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಲಿಯೋ ಹನಿ ಒಳ್ಳೆಯದು. ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಇಡುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸಿಡಿಪಿಒ ಗೀತಾ ಗುತ್ತರಗಿಮಠ ಹೇಳಿದರು.ಅವರು ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಇಂಡಿ ಪಟ್ಟಣದ ಮಾಳಿಂಗರಾಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಉತ್ಸುಕತೆ ಹೆಚ್ಚಿಸಲು ಮೂಲ ಸೌಲಭ್ಯ ಕಲ್ಪಿಸಿವುದು ಅಲ್ಲದೆ, ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳಲ್ಲಾಗುವ ಗುಣಾತ್ಮಕ ಬದಲಾವಣೆ,ಮಕ್ಕಳಿಗೆ ಕಲ್ಪಿಸಲಾಗುವ ಸೌಲಭ್ಯ ಮಕ್ಕಳ ಪೌಷ್ಟಿಕ ಮಟ್ಟ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳಲ್ಲಿ ಪಾತ್ರ ಬಹುಮುಖ್ಯವಾಗಿದೆ.ಒಂದು ಮಗು ಅಂಗನವಾಡಿ ಕೇಂದ್ರಕ್ಕೆ ಬಂದು ಚಿಕ್ಕ ವಯಸ್ಸಿನಲ್ಲಿಯೆ ಆಟ,ಪಠ್ಯೇತರ ಚಟುವಟಿಕೆಗಳ ಜೊತೆಗೆ ಬಹುತೇಕವಾಗಿ ಅಕ್ಷರ ಜ್ಞಾನವನ್ನು ಹೊಂದುತ್ತವೆ. ಆದ್ದರಿಂದ ಪಾಲಕರು ಅಂಗನವಾಡಿ ಶಿಕ್ಷಣದ ಕುರಿತು ತಮ್ಮ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಸಮಾಲೋಚನೆ ಮಾಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು. ಪಾಲಕರು ತಮ್ಮ ಮಕ್ಕಳ ಬೌದ್ಧಿಕ ಮಟ್ಟವನ್ನು ತಿಳಿದುಕೊಳ್ಳಲು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮಾಡಿಸುತ್ತಿರುವ ಚಟುವಟಿಕೆಗಳ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕು.ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಯೇ ಅಂಗನವಾಡಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಎಲ್ಲ ಮಕ್ಕಳೊಂದಿಗೆ ಬೆರೆಯುವುದನ್ನು ಮಗು ಅಂಗನವಾಡಿಯಲ್ಲಿ ಕಲಿತುಕೊಳ್ಳುತ್ತಾನೆ. ಮಕ್ಕಳ ಅಂಗವಿಕಲತೆಯ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಚಿಕತ್ಸೆ ಕೊಡಿಸಲು ಅಂಗನವಾಡಿಯಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಯಲ್ಲಪ್ಪ ಹದರಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ಇಲ್ಲಿ ಕೊಡಲಾಗುತ್ತದೆ. ಇದರ ಸದುಪಯೋಗ ಪಾಲಕರು ಪಡೆದುಕೊಳ್ಳಬೇಕು ಎಂದು ಹೇಳಿದರು.ಮೇಲ್ವಿಚಾರಕಿ ಪುತಳಾಬಾಯಿ ಭಜಂತ್ರಿ ಮಾತನಾಡಿ, ಇಂದು ನಮ್ಮ ಮಕ್ಕಳ ಶಾಲಾ ಹಂತ ಪ್ರಾರಂಭವಾಗುವುದು ಅಂಗನವಾಡಿ ಕೇಂದ್ರದಿಂದಲೇ ನಾವುಗಳು ನಮ್ಮ ಮಕ್ಕಳನ್ನು ಶಿಕ್ಷಣವಂತರಾಗುವಲ್ಲಿ ಪ್ರಯತ್ನ ಮಾಡಬೇಕು. ಸರ್ಕಾರದ ಯೋಜನೆ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶ್ರೀಶೈಲ ಪೂಜಾರಿ, ಪುರಸಭೆ ಸದಸ್ಯೆ ಸುಜಾತಾ ಬುದ್ದುಗೌಡ ಪಾಟೀಲ, ಮೈರೂನಬಿ ಇಂಡಿಕರ, ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಎಸ್.ಕುರತಳ್ಳಿ, ಪಿ.ಎ.ಕುಂಬಾರ, ಎಸ್.ಬಿ.ಅವಟಿ, ಎಸ್.ಎಂ.ಬಿರಾದಾರ ಮೊದಲಾದವರು ಸಭೆಯಲ್ಲಿ ಇದ್ದರು. ರೂಪಾ ಗಬ್ಬೂರ ಸ್ವಾಗತಿಸಿದರು. ಪಿ.ಎಂ.ಭಜಂತ್ರಿ ನಿರೂಪಿಸಿದರು. ಬಿ.ಎಸ್.ಕುರತಳ್ಳಿ ವಂದಿಸಿದರು.