ಯೋಧರ ತ್ಯಾಗ, ಬಲಿದಾನ ಯುವ ಪೀಳಿಗೆಗೆ ಸ್ಪೂರ್ತಿ

| Published : Dec 17 2023, 01:45 AM IST

ಯೋಧರ ತ್ಯಾಗ, ಬಲಿದಾನ ಯುವ ಪೀಳಿಗೆಗೆ ಸ್ಪೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಯುವಕರಿಗೆ ಸರ್ಕಾರದಿಂದ ಉಚಿತ ತರಬೇತಿ

ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ವಿಜಯ ದಿವಸ ಕಾರ್ಯಕ್ರಮವು ನಗರದ ರವೀಂದ್ರನಾಥ ಟಾಗೋರ್ ಕಡಲ ತೀರದ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಾಹಾಲಯದ ಆವರಣದಲ್ಲಿ ಶನಿವಾರ ಜರುಗಿತು.

ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಪರಮವೀರ ಚಕ್ರ ಪುರಸ್ಕೃತ ಮೇ.ರಾಮ ರಘೋಬಾ ರಾಣೆ ಅವರ ಪುತ್ಥಳಿಗೆ ಶಾಸಕ ಸತೀಶ ಸೈಲ್ ಒಳಗೊಂಡು ಗಣ್ಯರು ಪುಷ್ಪ ಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಸತೀಶ ಸೈಲ್, 1971 ರ ಯುದ್ಧದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆ ಮಾಡುವಲ್ಲಿ ಭಾರತೀಯ ಯೋಧರ ಕೊಡುಗೆ ಅಪಾರವಾಗಿದ್ದು, ಯೋಧರ ತ್ಯಾಗ ಬಲಿದಾನ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಕಾರವಾರದ ಮಣ್ಣಿನ ಮಗ ರಾಮಾ ರಾಣೆ ಜೀವಂತವಾಗಿರುವಾಗಲೇ ಪರಮವೀರ ಚಕ್ರ ಸ್ವೀಕರಿಸಿದ್ದಾರೆ. ಜಿಲ್ಲೆಯ ಯುವ ಪೀಳಿಗೆಯಲ್ಲಿ ಸೈನ್ಯಕ್ಕೆ ಸೇರಲು ಬೇಕಾದ ಎಲ್ಲ ಅಗತ್ಯ ಅರ್ಹತೆ ಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಿ ದೇಶ ಸೇವೆ ಸಲ್ಲಿಸಬೇಕು ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, 1971 ಡಿ.3 ರಿಂದ 16 ವರೆಗೆ ನಡೆದ ಯುದ್ಧದಲ್ಲಿ ಸಾವಿರಾರಾರು ಯೋಧರು ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ.ಅವರ ತ್ಯಾಗ, ಧೈರ್ಯ, ಶೌರ್ಯವನ್ನು ನಾವು ಸ್ಮರಿಸಬೇಕು. ಜಿಲ್ಲೆಯಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಯುವಕರಿಗೆ ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುವುದು.ಈಗಾಗಲೇ ನೌಕಾದಳದ ಅಧಿಕಾರಿಗಳಿಂದ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸುವ್ಯವಸ್ಥೆವಾದ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾವು ಕಂಡ ಕನಸು ನನಸು ಮಾಡಿಕೊಳ್ಳಲು ಜಿಲ್ಲಾಡಳಿತದಿಂದ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ನೌಕಾನೆಲೆಯ ತರಬೇತಿ ತಂಡದ ಕ್ಯೂಆರ್‌ಟಿ ಕ್ಯಾ. ಕೆ.ಯು.ಸಿಂಗ್ ಮಾತನಾಡಿ, ಯುವ ಜನತೆ ಕೇವಲ ಸರ್ಕಾರಿ ಉದ್ಯೋಗ ಪಡೆಯಲು ಮಾತ್ರ ಯೋಚಿಸದೇ ದೇಶದ ಸೇವೆ ಸಲ್ಲಿಸಲು ಸ್ಪರ್ಧಾತ್ಮಕ ರೀತಿಯಲ್ಲಿ ಪ್ರಯತ್ನಪಟ್ಟಾಗ ಯಶಸ್ವಿಯಾಗಿ ಸೇನೆ ಸೇರಬಹುದು. ಸೇನೆ ಸೇರಲು ಬಯಸುವ ಯುವ ಜನತೆಗೆ ಅದರಲ್ಲೂ ನೌಕಾದಳದಲ್ಲಿ ವಿಫುಲ ಅವಕಾಶಗಳಿದ್ದು,ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡಲ್ಲಿ ದೇಶ ಸೇವೆ ಸಲ್ಲಿಸಲು ಅವಕಾಶಗಳು ಸಿಗಲಿವೆ ಎಂದು ಅಭಿಪ್ರಾಯಿಸಿದರು.

ಇದೇ ವೇಳೆ ಯುದ್ಧದಲ್ಲಿ ಬಲಿದಾನಗೈದ ಯೋಧರ ಅವಲಂಬಿತರಿಗೆ ಸನ್ಮಾನ ಮಾಡಲಾಯಿತು. ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಯಿತು. ಬಳಿಕ ತಾಲೂಕಿನ ಅರಗಾದ ಐಎನ್‌ಎಸ್ ಕದಂಬ ನೌಕಾನೆಲೆಯ ಬ್ಯಾಂಡ್ ಸಿಬ್ಬಂದಿ ತಂಡ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ, ನಿವೃತ್ತ ಸ್ಕ್ವಾಡ್ ಲೀಡರ್ ಎಸ್.ಎಫ್ ಗಾಂವಕರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ. ಕ್ಯಾ.ರಮೇಶ ರಾವ್, ತಹಸೀಲ್ದಾರ್‌ ನಿಶ್ಚಲ್ ನರೋನ್ಹಾ, ನಗರಸಭೆ ಪೌರಾಯುಕ್ತ ಕೆ. ಚಂದ್ರಮೌಳಿ ಮೊದಲಾದವರು ಇದ್ದರು.