ಶನಿವಾರಸಂತೆ: ಬೆಂಗಳೂರು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇ ಗೌಡರು ಒಂದು ಜಾತಿ-ಧರ್ಮಕ್ಕೆ ಸೀಮಿತವಾಗಿದ್ದವರಲ್ಲ. ಸರ್ವಾಂಗೀಣ ಅಭಿವೃದ್ಧಿ ಚಿಂತನೆಯುಳ್ಳ ಮಹಾನ್ ವ್ಯಕ್ತಿ ಎಂದು ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ್ ಅಭಿಪ್ರಾಯಪಟ್ಟರು.ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಶನಿವಾರಸಂತೆ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಂಪೇ ಗೌಡರು ಜಲ ಸಂಪತ್ತು, ಕೃಷಿ ಸಂಪತ್ತಿನ ಚಿಂತನೆಯುಳ್ಳ ವ್ಯಕ್ತಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರನ್ನು ನಿರ್ಮಿಸಿ ಈ ಮೂಲಕ ಬೆಂಗಳೂರಿನಲ್ಲಿ ಕೃಷಿಗೆ ಉಪಯೋಗದ ದೂರದೃಷ್ಟಿಯಿಂದ ಕೆರೆಗಳನ್ನು ನಿರ್ಮಿಸಿದರು. ನಂತರ ಸರ್ವ ಜನಾಂಗದವರಿಗೆ ಅನುಕೂಲವಾಗುವ ಉದ್ದೇಶದಿಂದ ವ್ಯಾಪಾರ ವಹಿವಾಟು ನಡೆಸಲು ಬೇರೆ ಬೇರೆ ಮಾರುಕಟ್ಟೆಗಳನ್ನು ನಿರ್ಮಿಸುವ ಮೂಲಕ ಬೆಂಗಳೂರನ್ನು ಅಭಿವೃದ್ದಿಪಡಿಸಿದರು ಎಂದು ವಿವರಿಸಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎನ್. ರಘು ಮಾತನಾಡಿ-ವಿಜಯನಗರ ಅರಸರ ಸಾಮಂತ ಅರಸರಾಗಿದ್ದ ಕೆಂಪೇ ಗೌಡರು ವಿಜಯನಗರ ಅರಸರ ಒಡನಾಡಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಪರಿಕಲ್ಪನೆಯಂತೆ ಬೆಂಗಳೂರನ್ನು ನಿರ್ಮಿಸಿದ್ದಾರೆ. ಯಾವ ಜಾತಿ, ಧರ್ಮಕ್ಕೂ ಸೀಮಿವಾಗಿರದ ಕೆಂಪೇ ಗೌಡರು ಆ ಕಾಲದಲ್ಲೇ ಆರ್ಥಿಕ ತಜ್ಞರಾಗಿದ್ದರು ಎಂದರು.
ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಬೆಂಗಳೂರು ಸೃಷ್ಟಿಕರ್ತ ಕೆಂಪೇ ಗೌಡರು ನಾಡಿಗೆ ನಾಡಪ್ರಭು ಮಾತ್ರ ಅಲ್ಲ. ವಿಶ್ವಕ್ಕೇ ಬೆಂಗಳೂರನ್ನು ಪರಿಚಯಿಸಿದ ಮಹಾನ್ ವ್ಯಕ್ತಿಯಾದವರು. ನಾಡಿಗೆ ಹಲವಾರು ಕೊಡುಗೆಯನ್ನು ನೀಡಿರುವ ಅವರ ತತ್ವಾದರ್ಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಎನ್.ಕೆ. ಅಪ್ಪಸ್ವಾಮಿ ಗೌಡ ಮಾತನಾಡಿ, ನಾಡಿಗೆ ಬೆಂಗಳೂರು ನಿರ್ಮಿಸಿದ ಕೆಂಪೇ ಗೌಡರ ಸಾಧನೆ ಮತ್ತು ನೀಡಿರುವ ಕೊಡುಗೆ ಅಪಾರ. ಬೆಂಗಳೂರಿನಲ್ಲಿ ಅವರು ನಿರ್ಮಿಸಿದ ಕೆರೆಗಳ ಹೆಸರು, ವಿವಿಧ ಜನಾಂಗದ ವ್ಯಾಪಾರಸ್ಥರಿಗೆ ಅವರು ಮಾಡಿಕೊಟ್ಟ ಮಾರುಕಟ್ಟೆ ಮತ್ತು ಸ್ಥಳದ ಹೆಸರು ಈಗಲೂ ಇರುವುದು ರಾಜ್ಯದ ಜನರು ಹೆಮ್ಮೆಪಡುವ ವಿಷಯವಾಗಿದೆ ಎಂದರು.
ಕೆಂಪೇ ಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಹರೀಶ್, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕ ಪ್ರಮುಖರು ಪಾಲ್ಗೊಂಡಿದ್ದರು.