ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಸಂಭ್ರಮ, ನಾಟ್ಯೋತ್ಸವ

| Published : Feb 23 2025, 12:33 AM IST

ಸಾರಾಂಶ

ನಮ್ಮವರು ಪ್ರಪಂಚದಾದ್ಯಂತ ಯಕ್ಷಗಾನವನ್ನು ತಲುಪಿಸಿದ್ದಾರೆ. ಮಂಡಳಿ ಜತೆ ನಾವಿದ್ದೇವೆ.

ಹೊನ್ನಾವರ: ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 90ನೇ ವರ್ಷದ ಸಂಭ್ರಮ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -೧೫ ಕಾರ್ಯಕ್ರಮ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಯಕ್ಷಗಾನ ಉಡುಪಿ, ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕನ್ನಡದ ಕಲಾವಿದರೂ ದೊಡ್ಡ ಮಟ್ಟಕ್ಕೆ ಯಕ್ಷಗಾನವನ್ನು ಏರಿಸಿದ್ದಾರೆ. ನಮ್ಮವರು ಪ್ರಪಂಚದಾದ್ಯಂತ ಯಕ್ಷಗಾನವನ್ನು ತಲುಪಿಸಿದ್ದಾರೆ. ಮಂಡಳಿ ಜತೆ ನಾವಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಜತೆಯಾಗಿ ಮುನ್ನಡೆಯುತ್ತೇವೆ. ಜಿಲ್ಲೆಗೆ ಪೂರಕವಾದ ಕೆಲಸ ಮಾಡುತ್ತೇವೆ. ಯಕ್ಷಗಾನ ಉಳಿಸುವ ಕೆಲಸವನ್ನು ಕೆರೆಮನೆ ಕುಟುಂಬ ಮಾಡಿದೆ. ಈ ಕಾರ್ಯಕ್ರಮ ಮುಂದುವರಿಸಲು ಅಗತ್ಯವಾದಷ್ಟು ಅಲ್ಲದಿದ್ದರೂ ವೈಯಕ್ತಿಕ ಸಹಾಯ ಮಾಡುತ್ತೇನೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದ ಯಾವುದೋ ಒಂದು ದಿನಕ್ಕೆ ಅನುಕೂಲವಾಗಲು ಬಡ್ಡಿ ಇಟ್ಟು ಆ ಹಣವನ್ನು ಬಳಸಿಕೊಳ್ಳಲು ನೀಡುವಂತಹ ಕೆಲಸ ಮಾಡಿ ಕೊಡುತ್ತೇನೆ ಎಂದರು.

ಪ್ರದರ್ಶನಾಂಗಣ ಉದ್ಘಾಟಿಸಿದ ಬೆಂಗಳೂರು ಉತ್ತರ ವಿವಿ ಉಪಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ಯಕ್ಷಗಾನ ಪ್ರತಿಯೊಬ್ಬರ ನರನಾಡಿಗಳಲ್ಲಿದೆ.‌ ಶಾಸ್ತ್ರೀಯ ಮಟ್ಟವನ್ನು ಬಿಡದೇ ಪರಂಪರೆಯ ಕಲೆಯಾಗಿ ಉಳಿಸಿದ್ದಾರೆ. ಸಂಪ್ರದಾಯವನ್ನು ಉಳಿಸುವುದು ದೊಡ್ಡ ಕೆಲಸ. ನಾಲ್ಕು ತಲೆಮಾರು ಮುಂದುವರೆಸುತ್ತಿರುವುದು ಗಮನಾರ್ಹ. ಶಂಭು ಹೆಗಡೆಯವರ ಕನಸು ನನಸಾಗುತ್ತದೆ. ಒಂಬತ್ತು ದಿನ ಈ ಕಾರ್ಯಕ್ರಮ ಆಯೋಜಿಸುವುದು ಸುಲಭವಲ್ಲ. ಯಕ್ಷಗಾನ ಶಾಲೆಯನ್ನು ಮುಂದುವರಿಸುವಂತಾಗಬೇಕು ಎಂದರು.

ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದಕ್ಕೆ ನೀಡಲಾಯಿತು. ಪರಿಷತ್ತು ಪರವಾಗಿ ಅದರ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಕೆರೆಮನೆ ಯಕ್ಷಗಾನ ಮಂಡಳಿ ಹಾಗೂ ಜಾನಪದ ಪರಿಷತ್ ಈ ಎರಡು ಸಂಸ್ಥೆಗೆ ವಿಶ್ವಮಾನ್ಯತೆ ಸಿಕ್ಕಿದೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಶಿವರಾಮ್ ಹೆಗಡೆ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಮಹತ್ವದ್ದು. ಇದಕ್ಕಾಗಿ ಕೃತಜ್ಞತೆ ಸಲ್ಲಿಸುವೆ ಎಂದರು.

ಮುಖ್ಯ ಅಭ್ಯಾಗತ ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ.ಜಯರಾಜನ್ ಮಾತನಾಡಿ, ನಾಲ್ಕನೇ ಬಾರಿಗೆ ಈ ಕಾರ್ಯಕ್ರಮಕ್ಕೆ ಬಂದಿರುವೆ. ಇದು ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ. 90 ವರ್ಷ ಸಾಗಿ ಬಂದಿದೆ. ೨೦೦ ದೇಶಗಳಿಗೆ ಖ್ಯಾತಿ ಪಸರಿಸಿದೆ. ಯಕ್ಷಗಾನ ಎಂದರೇನು ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. ಇದು ದೊಡ್ಡ ಸಾಧನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಮಾತನಾಡಿ, ಕೆರೆಮನೆ ಮಂಡಳಿಗೆ ಯುನೆಸ್ಕೋ ಗೌರವಿಸಿದೆ. ಇದು ನಮ್ಮ ಜಿಲ್ಲೆಗೆ ಸಿಕ್ಕ ಗರಿಯಾಗಿದೆ. ಯಕ್ಷಗಾನ ಸಮೃದ್ಧ ಕಲೆಯನ್ನು ಉಳಿಸುವ ಕೆಲಸವಾಗಲಿ. ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡಮಿ ತಂದಿದ್ದೇವೆ. ಜಾನಪದಕ್ಕೆ ಬೇರೆ ಅಕಾಡಮಿ ಮಾಡಲಾಗಿದೆ. ಪಠ್ಯಕ್ರಮವನ್ನು ಸಹ ಮಾಡಿದ್ದೇವೆ. ಸುಸಂಸ್ಕೃತ ಜನಜೀವನ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮ ನಡೆಯಬೇಕು.‌ ಕನ್ನಡ- ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಿ. ಇಂತಹ ಕಾರ್ಯಕ್ರಮಕ್ಕೆ ನೆರವಾಗಲಿ. ನಾನು, ಶಾಸಕರು ಸೇರಿ ಸರ್ಕಾರದಿಂದ ಆಗಬಹುದಾದ ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದಲೂ ಹೆಚ್ಚು ಸಹಾಯ ಮಾಡಲು ಮುಂದಾಗುತ್ತೇನೆ ಎಂಬ ಭರವಸೆ‌ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು. ಹಿರಿಯ ಪತ್ರಕರ್ತ ಜಿ.ಯು.ಭಟ್ ಆಶಯ ನುಡಿಗಳನ್ನಾಡಿದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಇಡಗುಂಜಿ ಯಕ್ಷಗಾನ ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ವಂದಿಸಿದರು. ಎಲ್.ಎಂ.ಹೆಗಡೆ, ಈಶ್ವರ ಹೆಗಡೆ ನಿರೂಪಿಸಿದರು.