ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೆಲವು ಮುಸಲ್ಮಾನರು, ದಾರಿ ತಪ್ಪಿದ ಹುಡುಗರು, ಮೈ ಬ್ರದರ್ಸ್ ಅನ್ನುವ ಕಥೆಯನ್ನು ಬಿಟ್ಟು, ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಹಾಗೂ ಪೊಲೀಸರ ಮೇಲೆ ಮಸೀದಿಯ ಮೇಲಿಂದ ಕಲ್ಲುಗಳಿಂದ ದಾಳಿ ಮಾಡಿದ ಮುಸಲ್ಮಾನ ಗೂಂಡಾಗಳನ್ನು ಒದ್ದು ಒಳಗೆ ಹಾಕಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.ಈ ವಿಚಾರದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅವರನ್ನು ರಕ್ಷಿಸುವ ಕೆಲಸ ಮಾಡಿದರೆ ಸಂಪೂರ್ಣ ಕರ್ನಾಟಕದಿಂದ ಮದ್ದೂರು ಪಟ್ಟಣಕ್ಕೆ ಹಿಂದೂಗಳು ಬಂದು ನ್ಯಾಯ ಕೇಳಬೇಕಾಗುತ್ತದೆ. ದಾಳಿ ಮಾಡಿದವರು ಮಸೀದಿಯಿಂದ, ಕಲ್ಲುಗಳನ್ನು ಶೇಖರಣೆ ಮಾಡಿದ್ದರು ಎಂದರೆ, ರಾಜ್ಯ ಗುಪ್ತಚರ ಸಿದ್ದರಾಮಯ್ಯನವರ ರಾಜಕೀಯ ಲೆಕ್ಕಾಚಾರದಲ್ಲಿ ನಿರತವಾಗಿದೆ ಎಂದು ದೂರಿದರು. ಗುಪ್ತಚರ ಇಲಾಖೆ ಕೆಲಸ ಮರೆತಿದೆ. ಶಾಂತಿಧೂತರು ಎಂದು ಕರೆಸಿಕೊಳ್ಳುವ ಕೋಮೊಂದು ಸಾಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಮೂರ್ತಿಯ ಮೇಲೆ ಉಗುಳಿರುವುದು ಅವರ ರೋಗಗ್ರಸ್ಥ ಮನಃಸ್ಥಿತಿಯನ್ನು ತೋರಿಸುತ್ತದೆ. ಬಾಗಲಕೋಟೆ, ಮದ್ದೂರು, ಹುಬ್ಬಳ್ಳಿಯಲ್ಲೂ ಗಣಪತಿ ವಿಸರ್ಜನೆ ವೇಳೆ ಗಲಾಟೆ ಮಾಡಿರುವುದು ವರದಿಯಾಗಿದೆ. ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಗುರಿಯಾಗಿಸಿಕೊಂಡು ಗಲಾಟೆ ಮಾಡುತ್ತಿರುವುದು ಹೊಸದಲ್ಲ. ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಲೇ ಈ ರೀತಿ ಆಗುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಗಣಪತಿ ವಿಸರ್ಜನೆ ಸಮಯದಲ್ಲಿ ಮದ್ದೂರು, ಸಾಗರ, ಹುಬ್ಬಳ್ಳಿ, ಬಾಗಲಕೋಟೆ ಸೇರಿ ರಾಜ್ಯದ ಎಲ್ಲೇ ಗಲಾಟೆಯಾಗಿದ್ದರೂ ತಪ್ಪಿತಸ್ಥರ ಮೇಲೆ ಜಾಮೀನು ರಹಿತ ಕೇಸ್‌ಗಳನ್ನು ದಾಖಲಿಸಲಿ. ಹಿಂದಿರುವ ಸ್ಲೀಪರ್ ಸೆಲ್‌ಗಳ ಬಗ್ಗೆ ತನಿಖೆ ಮಾಡಬೇಕು.ಮಂಡ್ಯದ ಮದ್ದೂರಿಗೆ ಸದ್ಯದಲ್ಲೇ ಭೇಟಿ ನೀಡುತ್ತೇನೆ, ಮದ್ದೂರು ಹಿಂದೂಗಳು ಯಾವುದಕ್ಕೂ ಹೆದರಬೇಡಿ, ಎದೆಗುಂದಬೇಡಿ, ನಿಮ್ಮೊಂದಿಗೆ ಸಂಪೂರ್ಣ ಹಿಂದೂ ಸಮಾಜ ನಿಂತಿದೆ. ನಾನು ಮದ್ದೂರಿಗೆ ಬರುವ ಮುನ್ನವೇ ಕಲ್ಲು ಹೊಡೆದ ಮುಸಲ್ಮಾನ ಗೂಂಡಾಗಳ ಹೆಡೆಮುರಿ ಕಟ್ಟಿ, ಜೈಲಿಗೆ ತಳ್ಳಬೇಕು. ಇಲ್ಲದಿದ್ದರೇ ಪ್ರತಿಭಟನೆ ಇನ್ನು ತೀವ್ರ ಸ್ವರೂಪ ಪಡೆಯುತ್ತದೆ ಎಂದು ತಮ್ಮ ಟ್ವಿಟ್‌ನಲ್ಲಿ ಯತ್ನಾಳ ತಿಳಿಸಿದ್ದಾರೆ.