ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಚಾಲುಕ್ಯ ಉತ್ಸವವನ್ನು ನವೆಂಬರ್ ನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಪ್ರಸಕ್ತ ಸಾಲಿನ ಚಾಲುಕ್ಯ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಐತಿಹಾಸಿಕ ನಗರಗಳಾದ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ತಲಾ ಒಂದು ದಿನ ಸೇರಿ ಒಟ್ಟು ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಗೊತ್ತುಪಡಿಸಿದ ದಿನಾಂಕಗಳಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಕಾರ್ಯಕ್ರಮ ಆಯೋಜನೆಗೆ ತಗಲುವ ಅಂದಾಜು ವೆಚ್ಚ ನಿರ್ಧರಿಸಲು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜಂಟಿಯಾಗಿ ಸಭೆ ನಡೆಸಲು ತಿಳಿಸಿದ ಅವರು, ಸರಕಾರ ಪ್ರಸಕ್ತ ಬಜೆಟ್ ನಲ್ಲಿ ಚಾಲುಕ್ಯ ಉತ್ಸವವನ್ನು ನೃತ್ಯೋತ್ಸವ ರೂಪದಲ್ಲಿ ಆಯೋಜಿಸಲು ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಇನ್ನು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಬಿಡುಗಡೆಗೆ ಕ್ರಮವಹಿಸಲಾಗುತ್ತದೆ. ಮೂರು ದಿನಗಳ ಕಾರ್ಯಕ್ರಮದ ಅಂದಾಜು ವೆಚ್ಚದ ಪಟ್ಟಿ ತಯಾರಿಸಲು ತಿಳಿಸಿದ ಸಚಿವರು, ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸುವ ಕಾರ್ಯವಾಗಬೇಕು. ಜಿಲ್ಲಾ ಪ್ರವಾಸೋದ್ಯಮ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮ ರೂಪುರೇಷೆ ಹಾಕಿಕೊಳ್ಳಲು ತಿಳಿಸಿದ ಅವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿ ರಚಿಸಲು ಸೂಚಿಸಿದರು. ಉತ್ಸವದಲ್ಲಿ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮ ಆಯೋಜನೆ ಮಾಡಬೇಕು. ಸ್ಥಳೀಯ ಕಲಾವಿದರಿಗೆ ಶೇ.50 ಹಾಗೂ ಬೇರೆ ರಾಜ್ಯ, ರಾಷ್ಟ್ರದ ಕಲಾವಿದರಿಗೆ ತಲಾ ಶೇ.50ರಷ್ಟು ಅವಕಾಶ ಕಲ್ಪಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಿರುವ ಚಾಲುಕ್ಯರ ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಮೆಲುಕು ಹಾಕುವ ಈ ಮೂರು ದಿನಗಳ ಸಂಗೀತ ನೃತ್ಯೋತ್ಸವದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರು, ಸಂಗೀತಗಾರರು, ನೃತ್ಯ ತಂಡಗಳು ಕರೆಯಿಸುವದಲ್ಲದೆ, ಚಾಲುಕ್ಯರ ನಾಡಿನ ಐತಿಹಾಸಿಕ ಪರಂಪರೆ ಕುರಿತ ವಿಚಾರಗೋಷ್ಠಿ, ಗ್ರಾಮೀಣ ಕ್ರೀಡಾಕೂಟ ಆಯೋಜಿಸಲು ಸೂಚಿಸಿದರು. ಮೂರು ಕಡೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳ ರೂಪಿಸಲು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.