ಮುಂಬೈ ಮೀರಿಸಿದ ಬೆಳಗಾವಿ ಗಣೇಶ ಮೆರವಣಿಗೆ

| Published : Sep 09 2025, 01:01 AM IST

ಸಾರಾಂಶ

ಬೆಳಗಾವಿ ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬರೋಬ್ಬರಿ 38 ಗಂಟೆಗಳ ಕಾಲ ನಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬರೋಬ್ಬರಿ 38 ಗಂಟೆಗಳ ಕಾಲ ನಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಅದ್ಧೂರಿ ಗಣೇಶೋತ್ಸವಕ್ಕೆ ಹೆಸರುವಾಸಿಯಾಗಿರುವ ಬೆಳಗಾವಿಯಲ್ಲಿ ಈ ಬಾರಿ ಮುಂಬೈನೂ ಮೀರಿ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದಿದೆ. ಸೆ.6ರಂದು ಸಂಜೆ 4 ಗಂಟೆಗೆ ಆರಂಭವಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಸೋಮವಾರ ಬೆಳಗಿನ ಜಾವ ಸುಮಾರು 6.30 ರವರೆಗೂ ನಡೆದಿದೆ. ಮುಂಬೈನಲ್ಲಿ 35 ಗಂಟೆಗಳ ಕಾಲ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದರೆ, ಬೆಳಗಾವಿಯಲ್ಲಿ 38 ಗಂಟೆಗಳ ಕಾಲ ನಿರಂತರವಾಗಿ ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿದೆ. ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಶೀಘ್ರದಲ್ಲೇ ವಿವಿಧೆಡೆಗಳಲ್ಲಿ ಹೊಂಡದಲ್ಲಿ ವಿಸರ್ಜನೆಯಾದ ಗಣಪತಿ ಮೂರ್ತಿಗಳ ವಿಲೇವಾರಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಡಿಜೆ ಜಪ್ತಿ:

ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರದ ಶಿವಾಜಿ ನಗರದಲ್ಲಿ ಮಾರ್ಕೆಟ್‌ ಠಾಣೆ ಪೊಲೀಸರು ಸಾರ್ವಜನಿಕ ಗಣೇಶ ಮಂಡಳದ ಡಿಜೆ ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಗಣಪತಿ ಮೆರವಣಿಗೆ ವೇಳೆ ನಿಯಮ ಮೀರಿ ಸೌಂಡ್‌ಬಾಕ್ಸ್‌ಗಳ ಬಳಕೆ ಮಾಡಲಾಗಿದೆ. ಅನುಮತಿ ಪಡೆಯದೇ ಡಾಲ್ಬಿ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಿವಾಜಿ ನಗರದ ಮಹಾಮಂಡಳ ಅಧ್ಯಕ್ಷ, ಸದಸ್ಯ ಮತ್ತು ಡಿಜೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಗಣೇಶ ಮೂರ್ತಿಗಳ ವಿಸರ್ಜನಾ ಮೆವರಣಿವೇಳೆ ವೇಳೆ ಜೈ ಜೈ ಮಹಾರಾಷ್ಟ್ರ ಹಾಕಿದ್ದ ಡಿಜೆ ಆಪರೇಟರ್‌ಗೆ ನಡೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾನೆ. ಇನ್ನೊಮ್ಮೆ ಈ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾನೆ.