ಕಿತ್ತೂರ ಚೆನ್ನಮ್ಮ ಭಾವಚಿತ್ರ ಮೆರವಣಿಗೆ

| Published : Mar 13 2024, 02:03 AM IST

ಸಾರಾಂಶ

ಮುದಗಲ್ ಸಮೀಪ ಬುದ್ದಿನ್ನಿ ಗ್ರಾಮದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಭಾವಚಿತ್ರ ಮೆರವಣಿಗೆ ನಂತರ ಮೂರ್ತಿಯನ್ನು ಅನಾವರಣಗೊಳಿಸಿ ಬಸವಮೃತ್ಯುಂಜಯ ಸ್ವಾಮಿಗಳು ಭಗವಾಧ್ವಜವನ್ನು ಜನರತ್ತ ಬೀಸುತ್ತಿರುವದು.

ಮುದಗಲ್: ಪಂಚಮಸಾಲಿ ಸಮಾಜ ಬಾಂಧವರು ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿ ಅನಾವರಣದ ಹಿನ್ನೆಲೆ ಸಮೀಪದ ಬುದ್ದಿನ್ನಿ ಗ್ರಾಮದಲ್ಲಿ ಕಿತ್ತೂರ ಚೆನ್ನಮ್ಮ ಭಾವಚಿತ್ರ ಮೆರವಣಿಗೆಯು ಸಂಭ್ರಮದಿಂದ ಜರುಗಿತು.

ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಯನ್ನು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿ ಚಾಲನೆ ನೀಡಿದರು. ಕುಂಭ ಕಳಸದೊಂದಿಗೆ ಕಲಾ ತಂಡಗಳೊಂದಿಗೆ ಜಯ ಘೋಷಣೆ ಹಾಕುತ್ತ ಡಿಜೆ ಶಬ್ಧಕ್ಕೆ ಯುವಕರು ಕುಣಿಯುತ್ತ ಸಂಭ್ರಮಿಸಿದರು. ವಿಶೇಷವಾಗಿ ಕುದುರೆ ಕುಣಿತ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯು ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ನಿರ್ಮಿಸಿದ ಮೂರ್ತಿ ಅನಾವರಣ ಸ್ಥಳದವರೆಗೆ ತೆರಳುತ್ತಿದ್ದಂತೆ ಜೈ ಜೈ ಪಂಚಮಸಾಲಿ ಎಂದು ಘೋಷಣೆಗಳನ್ನು ಕೂಗುತ್ತ ಬಸವಮೃತ್ಯುಂಜಯಸ್ವಾಮಿಗಳ ಪರವಾಗಿಯೂ ಘೋಷಣೆ ಕೂಗಿದರು. ಮೂತಿರ್ಯನ್ನು ಸಂಸದರ ಪುತ್ರ ಅಮರೇಶ ಕರಡಿ ಅನಾವರಣಗೊಳಿಸಿದರು. ಎಲ್ಲರೂ ಮೂರ್ತಿ ಅನಾವರಣಗೊಳ್ಳುತ್ತಿದ್ದಂತೆ ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.

ಮೆರವಣಿಗೆಯಲ್ಲಿ ರಾಯಚೂರು ಜಿಲ್ಲಾ ಮೀಸಲಾತಿ ಹೋರಾಟ ಸಮೀತಿ ಅದ್ಯಕ್ಷ ಮಹಾಂತೇಶ ಪಾಟೀಲ್, ತಾಲೂಕಾಧ್ಯಕ್ಷ ಅಮರೇಶ ತಾವರಗೇರಾ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ಯುವ ಘಟಕದ ತಾಲೂಕಾಧ್ಯಕ್ಷ ವಿಜಯಕುಮಾರ ಹೊಸಗೌಡ್ರು, ಸುರೇಶ ಪಲ್ಲೇದ ಬಸವರಾಜ ಗಸ್ತಿ. ಪಂಚಮಸಾಲಿ ಸಮಾಜ ಬಾಂಧವರು ಸೇರಿದಂತೆ ಗ್ರಾಮದ ಹಿರಿಯರು, ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.