ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕರಾವಳಿ ಪ್ರದೇಶದಲ್ಲಿ ಗೇರು ಮಾವು ಹಾಗೂ ಹಲಸುಗಳು ಬೇಸಗೆ ಕಾಲದಲ್ಲಿ ಸರ್ವೆ ಸಾಮಾನ್ಯ. ಆದರೆ ಹಲಸು ಹಣ್ಣುಗಳನ್ನು ಸರಿಯಾಗಿ ಸಂಸ್ಕರಿಸಲು ವ್ಯವಸ್ಥೆ ಗಳಿಲ್ಲದೆ ಹಾಳಾಗುವುದೆ ಜಾಸ್ತಿ. ಅದಕ್ಕಾಗಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಹಲಸಿನ ಸಂಸ್ಕರಣೆ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ತಯಾರಿಕಾ ಘಟಕವು ನಿಟ್ಟೆಯಲ್ಲಿ ಮಾ.15ರಂದು ಆರಂಭವಾಗಲಿದೆ.
ಹಲಸು ಬೆಳೆಗಾರರು: ರಾಜ್ಯದಲ್ಲಿ ಬಯಲು ಸೀಮೆ ಹಾಗೂ ಕರಾವಳಿ ಸೇರಿದಂತೆ ಎಲ್ಲೆಡೆ ಸುಮಾರು 70% ವಿವಿಧ ಪ್ರದೇಶಗಳಲ್ಲಿ ಹಲಸು ಬೆಳೆಯುತ್ತಿದ್ದು ಸಂಸ್ಕರಣೆ ಮಾಡುವ ಘಟಕಗಳಿಲ್ಲದೆ 90% ದಷ್ಟು ಹಲಸು ಮಣ್ಣುಪಾಲಾಗುತ್ತಿವೆ. ಅದಕ್ಕಾಗಿ ರಾಜ್ಯದಲ್ಲಿ ಹಲಸು ಬೆಳೆಗಾರರನ್ನು ಗುರುತಿಸಿ ಹಲಸು ಬೆಳೆಗಾರರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಸಂಘಗಳು ಸ್ಥಾಪನೆಯಾಗಿದ್ದು 590 ಜನ ಹಲಸು ಬೆಳೆಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಬೆಳೆಗಾರರ ಸಂಘವನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 5369 ಹೆಕ್ಟೇರ್ ಪ್ರದೇಶಗಳಲ್ಲಿ ಹಲಸು ಬೆಳೆಯಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 553 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಿದ್ದು ವಾರ್ಷಿಕವಾಗಿ 200796 ಟನ್ ಬೆಳೆ ಬೆಳೆಯಲಾಗುತ್ತದೆ.ನೆರವು: ಕೇಂದ್ರ ಸರ್ಕಾರದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನಾ ನಿಧಿ ಯೋಜನೆ ಹಾಗು ನಿಟ್ಟೆ ಹಲಸು ಸಂರಕ್ಷಣಾ ಕ್ಲಸ್ಟರ್, ನಿಟ್ಟೆ ಇಂಕ್ಯೂಬ್ಯುಷನ್ ಸೆಂಟರ್, ನಿಟ್ಟೆ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ ಎಂಇ ಸಹಯೋಗದೊಂದಿಗೆ ಸುಮಾರು 6.50 ಕೋಟಿ ರು. ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲಸು ಉತ್ಪನ್ನಗಳು ದೊರೆಯಲಿವೆ.ಉದ್ಯೋಗ ಸೃಷ್ಟಿ: ಹಲಸಿನ ಸಂಸ್ಕರಣೆ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ನಿರ್ಮಾಣ ಸೇರಿದಂತೆ ಸುಮಾರು ಒಂದು ಸಾವಿರ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನಿರ್ಮಾಣ ಸಾಧ್ಯವಾಗಲಿದೆ. ಸ್ಥಳೀಯ ಮಟ್ಟದಲ್ಲಿ ಹಲಸು ಬೆಳೆಯುವ ರೈತರಿಗೆ ಉತ್ತಮ ಮೌಲ್ಯ ದೊರೆಯಲಿದೆ. ಹಲಸಿನಿಂದ ಒಟ್ಟು 20 ಉತ್ಪನ್ನಗಳು ತಯಾರಿಸಲಾಗುತ್ತಿದೆ.ಬೃಹತ್ ಸಂಸ್ಕರಣ ಘಟಕ ಗಳು: ಹಲಸು ಕೇವಲ ಬೇಸಿಗೆಯಲ್ಲಿ ಬೆಳೆಯುವ ಕಾರಣ ಎಲ್ಲಾ ಋತುವಿನಲ್ಲಿ ಲಭ್ಯತೆ ಕಡಿಮೆ. ಆದ್ದರಿಂದ ಹಲಸು ಸಂಸ್ಕರಣೆಗಾಗಿ ಬೃಹತ್ ಸಂಸ್ಕರಣ ಘಟಕ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಎಲ್ಲಾ ಋತುವಿನಲ್ಲಿ ಹಲಸುಗಳ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ.ರಾಜ್ಯದಲ್ಲಿ ಮೊದಲ ಬಾರಿ ಹಲಸು ಸಂಸ್ಕರಣಾ ಘಟಕ ನಿಟ್ಟೆಯಲ್ಲಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಗೆ ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರವು ಸಹಯೋಗದಲ್ಲಿ ಈ ಘಟಕ ನಿರ್ಮಾಣವಾಗಿದೆ ಎಂದು ಹಲಸು ಸಂರಕ್ಷಿತ ಕ್ಲಸ್ಟರ್ ಘಟಕದ ನಿರ್ದೇಶಕ ನವೀನ್ ನಾಯಕ್ ಹೇಳಿದರು.ಮಾರ್ಚ್ 15 ಹಾಗೂ 16 ರಂದು ನಿಟ್ಟೆ ಪ್ರಾದೇಶಿಕ ಕೃಷಿ ಉದ್ಯಮ ಸಮಾವೇಶ ನಿಟ್ಟೆಯಲ್ಲಿ ನಡೆಯಲಿದ್ದು ರಾಜ್ಯದ ವಿವಿಧೆಡೆಗಳಿಂದ ಹಲಸು ಬೆಳೆಗಾರರು ಆಗಮಿಸುತ್ತಿದ್ದಾರೆ. ವಿವಿಧ ಹಲಸು ತಳಿಗಳ ಪ್ರದರ್ಶನ ಸೇರಿದಂತೆ ವಿವಿಧ ಹಲಸು ಉತ್ಪನ್ನಗಳು ಪರಿಚಯ ಬೆಳೆಗಾರರಿಗೆ ತಿಳಿಸುವ ಕಾರ್ಯವಾಗಲಿದೆ ಎಂದು ನಿಟ್ಟೆ ಅಟಲ್ ಇಂಕಿಬ್ಯುಲೆಸನ್ ಸೆಂಟರ್ ಕಾರ್ಯನಿರ್ವಾಹಕ ಅಧಿಕಾರಿ ಎ.ಪಿ. ಆಚಾರ್ಯ ತಿಳಿಸಿದರು.