ಸಾರಾಂಶ
ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ತಪ್ಪೆಸಗಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಪ್ರಮುಖರಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ಖಂಡನೀಯ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಈ ತಪ್ಪೆಸಗಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜನಿವಾರ ಧಾರಣಿಯು ಸನಾತನ ಧರ್ಮದ ಪದ್ಧತಿಯಾಗಿದ್ದು, ಸಂವಿಧಾನದಲ್ಲೂ ಈ ಕುರಿತು ಆಕ್ಷೇಪ ಇಲ್ಲದಿರುವಾಗ ವಿದ್ಯಾರ್ಥಿಗಳ ಮಾನಸಿಕತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಸಿಬ್ಬಂದಿಯ ವರ್ತನೆ ಕ್ಷಮಾರ್ಹವಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಸಿ.ರಾಮಚಂದ್ರ ಮೂಗೂರು, ಕಾರ್ಯದರ್ಶಿ ಬಿ.ಕೆ.ಜಗದೀಶ್, ಖಜಾಂಚಿ ರವಿಶಂಕರ್, ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ ಮತ್ತಿತರರು ಪಾಲ್ಗೊಂಡಿದ್ದರು.
------------------------------------24, 25ರಂದು ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ
ಕನ್ನಡಪ್ರಭವಾರ್ತೆ ಸೋಮವಾರಪೇಟೆಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ 24 ಮತ್ತು 25ರಂದು ನಡೆಯಲಿದೆ ಎಂದು ಶ್ರೀ ಸಬ್ಬಮ್ಮ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎನ್. ರಾಜಗೋಪಾಲ್ ತಿಳಿಸಿದ್ದಾರೆ.24ರಂದು ಬೆಳಗ್ಗೆ 6.30ರಿಂದ 8.30 ರವರೆಗೆ ದೇವರ ಗಂಗಾಸ್ನಾನ, ಮುಡಿ ಹರಕೆ ಒಪ್ಪಿಸುವುದು, ಬೀದಿ ರಾಜಾಂಗಣದಲ್ಲಿ ಮೆರವಣಿಗೆ, ಸನ್ನಿಧಿ ಪ್ರವೇಶ ನಡೆಯಲಿದೆ. 25ರಂದು ಹಣ್ಣುಕಾಯಿ ಹಾಗೂ ಮಡೆ ಉತ್ಸವ, ಸುಗ್ಗಿ ಕುಣಿತ ಜರುಗಲಿದ್ದು, ಇನಕನಳ್ಳಿ ಗ್ರಾಮಸ್ಥರು ಪ್ರಸಕ್ತ ಸಾಲಿನ ಸುಗ್ಗಿ ದೇವರ ಕಾರ್ಯ ನೆರವೇರಿಸಲಿದ್ದಾರೆ.
27ರಂದು ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.