ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್‌ಗಳ ಹಾವಳಿ ಪ್ರಕರಣ

| Published : Apr 23 2025, 12:33 AM IST

ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್‌ಗಳ ಹಾವಳಿ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನಿಯಮ ಬಾಹಿರವಾಗಿ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾಗಿ ನೇಮಕ ಮಾಡಿಕೊಂಡಿದ್ದ ಮೂವರನ್ನು ಹುದ್ದೆಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗೆ ತನಿಖಾ ತಂಡ ಶಿಫಾರಸು ಮಾಡಿದೆ. ನಿರ್ಮಿತಿ ಕೇಂದ್ರದ ಬಿ.ಎಲ್.ವೇಣುಗೋಪಾಲ್, ಕೆ.ಪ್ರಶಾಂತ್, ಮಂಡ್ಯ ತಾಲೂಕು ಚಿಕ್ಕಬಳ್ಳಿಯ ಕೆ.ಪಿ.ಶ್ರೀಧರ್ ಕೆಲಸದಿಂದ ವಜಾಗೊಂಡ ನಿಯಮಬಾಹಿರವಾಗಿ ನೇಮಕಗೊಂಡು ವಜಾಗೊಂಡ ನೌಕರರಾಗಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನಿಯಮ ಬಾಹಿರವಾಗಿ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾಗಿ ನೇಮಕ ಮಾಡಿಕೊಂಡಿದ್ದ ಮೂವರನ್ನು ಹುದ್ದೆಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗೆ ತನಿಖಾ ತಂಡ ಶಿಫಾರಸು ಮಾಡಿದೆ.

ನಿರ್ಮಿತಿ ಕೇಂದ್ರದ ಬಿ.ಎಲ್.ವೇಣುಗೋಪಾಲ್, ಕೆ.ಪ್ರಶಾಂತ್, ಮಂಡ್ಯ ತಾಲೂಕು ಚಿಕ್ಕಬಳ್ಳಿಯ ಕೆ.ಪಿ.ಶ್ರೀಧರ್ ಕೆಲಸದಿಂದ ವಜಾಗೊಂಡ ನಿಯಮಬಾಹಿರವಾಗಿ ನೇಮಕಗೊಂಡು ವಜಾಗೊಂಡ ನೌಕರರಾಗಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ನಿರ್ಮಿತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಮೂವರು ನಕಲಿ ಅಂಕಪಟ್ಟಿ ದಾಖಲೆಗಳನ್ನು ನೀಡಿ ಕೆಲಸಕ್ಕೆ ಸೇರಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಜಿಲ್ಲಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಪ್ರತಾಪ್, ಸಹಾಯಕ ಅಭಿಯಂತರ ರಾಘವೇಂದ್ರ ಅವರನ್ನೊಳಗೊಂಡ ತನಿಖಾ ತಂಡ ರಚಿಸಿತ್ತು. ತನಿಖಾ ಒಂದೂವರೆ ತಿಂಗಳ ಕಾಲ ತನಿಖೆ ನಡೆಸಿ ಸಲ್ಲಿಸಿದ ವರದಿಯಲ್ಲಿ ಈ ಮೂವರು ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಗೊಂಡಿರುವುದು ಕಂಡುಬಂದಿದೆ.

ವರದಿಯಲ್ಲಿರುವುದೇನು?

ಕೆ.ಪ್ರಶಾಂತ್ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಆಗಿ ೬.೩.೨೦೧೭ರಿಂದ ನೇಮಕಗೊಂಡಿದ್ದಾರೆ. ಇವರು ಮೇಲುಕೋಟೆಯ ಎಸ್‌ಇಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೨೯.೧೦.೨೦೨೦ರಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿದ್ದು, ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ೯.೨.೨೦೨೩ರಲ್ಲಿ ಪಡೆದಿರುವುದು ಕಂಡುಬಂದಿದೆ. ನಿಗದಿತ ವಿದ್ಯಾರ್ಹತೆ ಪೂರೈಸುವ ಮುನ್ನವೇ ೨೦೧೭ರಲ್ಲಿ ಸೈಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ವೇತನ ಪಡೆದಿರುವುದು ದೃಢಪಟ್ಟಿರುವುದು ತನಿಖೆ ವೇಳೆ ಕಂಡುಬಂದಿದೆ.

ಕೆ.ಪಿ.ಶ್ರೀಧರ್ ೧.೮.೨೦೧೩ರಿಂದ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯನಿರ್ವಹಿಸಿದ್ದು, ನೇಮಕಗೊಂಡ ಸಂದರ್ಭದಲ್ಲಿ ಡಿಪ್ಲೊಮಾ ಉತ್ತೀರ್ಣರಾದ ಪ್ರಮಾಣಪತ್ರ ಹಾಜರುಪಡಿಸಿರುವುದು ಕಂಡುಬಂದಿಲ್ಲ. ಶ್ರೀಧರ್ ಅರಕೆರೆಯ ಸರ್ಕಾರಿ ಪಾಲಿಟೆಕ್ನಿಕಕ್ ಕಾಲೇಜಿನಲ್ಲಿ ೨೦೨೩ರ ನವೆಂಬರ್-ಡಿಸೆಂಬರ್‌ನಲ್ಲಿ ಡಿಪ್ಲೊಮಾ ತೇರ್ಗಡೆಯಾಗಿದ್ದು, ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಿಂದ ತಾತ್ಕಾಲಿಕ ಡಿಪ್ಲೊಮಾ ಪ್ರಮಾಣಪತ್ರವನ್ನು ೬.೨.೨೦೨೪ರಲ್ಲಿ ಪಡೆದಿರುವುದು ಕಂಡುಬಂದಿದೆ. ಇದರ ಪ್ರಕಾರ ಶ್ರೀಧರ್ ಡಿಪ್ಲೊಮಾ ಉತ್ತೀರ್ಣರಾಗದೆ ೨೦೧೩ರಿಂದ ಸೈಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದಾಖಲೆಗಳಿಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶವಿಲ್ಲವೆಂದು ಯೋಜನಾ ನಿರ್ದೇಶಕರಾಗಿದ್ದ ಹರ್ಷ ಅವರು ತಿಳಿಸಿದ ಬಳಿಕ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಕೆಲಸ ಬಿಟ್ಟಿರುವುದು ಗೊತ್ತಾಗಿದೆ.

ಇನ್ನು ಬಿ.ಎಲ್.ವೇಣುಗೋಪಾಲ್ ಅವರು ೧.೧.೨೦೨೩ರಿಂದ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನೇಮಕಾತಿ ಸಮಯದಲ್ಲಿ ಬಿ-ಟೆಎಕ್-ಸಿವಿಲ್ ಎಂಜಿನಿಯರಿಂಗ್ ಪ್ರೋಗ್ರಾಂ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಈ ಪ್ರಮಾಣಪತ್ರ ನೀಡಿರುವ ದಕ್ಷ ವಿಶ್ವವಿದ್ಯಾನಿಲಯವು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವ ವಿದ್ಯಾನಿಲಯಗಳ ಪಟ್ಟಿಯಲ್ಲಿ ಇಲ್ಲದಿರುವುದು ದೆಹಲಿ ಯುಜಿಸಿ ಕಾರ್ಯದರ್ಶಿಯವರು ನೀಡಿರುವ ಸತ್ಯಪಾಲನಾ ವರದಿಯಿಂದ ಸ್ಪಷ್ಟವಾಗಿದೆ. ಆದ್ದರಿಂದ ಬಿ.ಎಲ್.ವೇಣುಗೋಪಾಲ್ ಅವರು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ್ದರೂ ಹೆಚ್ಚಿನ ವಿದ್ಯಾರ್ಹತೆ ಮೇಲೆ ನೇಮಕಗೊಂಡಿರುವುದು ಕಂಡುಬಂದಿದೆ.

ಹಾಗಾಗಿ ಈ ಮೂವರು ನೌಕರರು ನೇಮಕಾತಿ ಹೊಂದುವ ದಿನ ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಿಕೊಂಡಿರುವುದು ನಿಯಮಬಾಹಿರವಾಗಿದೆ. ಆದ್ದರಿಂದ ಈ ಮೂವರನ್ನೂ ಮಂಡ್ಯ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಹುದ್ದೆಯಿಂದ ಕೈಬಿಡುವಂತೆ ನಿಯಮಾನುಸಾರ ಕ್ರಮ ವಹಿಸಲು ಶಿಫಾರಸು ಮಾಡಿದೆ.ಯೋಜನಾ ವ್ಯವಸ್ಥಾಪಕರಾಗಿದ್ದ ನರೇಶ್ ನೇರ ಹೊಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಾದಿತ ನೌಕರರನ್ನು ಸೈಟ್ ಎಂಜಿನಿಯರ್ ಹುದ್ದೆಗೆ ನಿಯಮಬಾಹಿರವಾಗಿ ನೇಮಕ ಮಾಡಿಕೊಳ್ಳಲು ಹಿಂದಿನ ಯೋಜನಾ ವ್ಯವಸ್ಥಾಪಕ ನರೇಶ್‌ ಅವರೇ ನೇರ ಕಾರಣಕರ್ತರು ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.

ನೇಮಕಾತಿ ಮಾಡಿಕೊಳ್ಳುವ ಸಮಯದಲ್ಲಿ ವಿದ್ಯಾರ್ಹತೆ, ವೇತನ, ಅನುಭವ, ಷರತ್ತುಗಳನ್ನೊಳಗೊಂಡ ಅಧಿಸೂಚನೆ ಹೊರಡಿಸಿ ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹತೆಯನ್ನು ವಿವರಿಸಿ ಸಭೆಯಲ್ಲಿ ಮಂಡಿಸುವುದರೊಂದಿಗೆ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆ ನಡೆಸದಿರುವುದು ಕಂಡುಬಂದಿದೆ.

ಅಭ್ಯರ್ಥಿಗಳು ಸಲ್ಲಿಸಿದ್ದ ವಿದ್ಯಾರ್ಹತೆಯ ದಾಖಲೆಗಳ ನೈಜತೆಯ ಕುರಿತು ನೇಮಕಾತಿ ಪೂರ್ವದಲ್ಲಿ ದೃಢೀಕರಣ ಪಡೆದುಕೊಂಡಿಲ್ಲ. ವೃಂದಬಲವನ್ನು ನಿಗದಿಪಡಿಸಿ ಆಯಾ ಹುದ್ದೆಗೆ ತತ್ಸಮಾನ ವಿದ್ಯಾರ್ಹತೆ, ವೇತನ ನಿಗದಿಪಡಿಸಿಲ್ಲ. ಯೋಜನಾ ವ್ಯವಸ್ಥಾಪಕರಾಗಿದ್ದ ನರೇಶ್ ವಿವಾದಿತ ನೌಕರರಲ್ಲಿ ಒಬ್ಬರಾದ ಕೆ.ಪ್ರಶಾಂತ್ ನೇಮಕಾತಿ ವಿಚಾರವಾಗಿ ಹೊರಡಿಸಿರುವ ನೇಮಕಾತಿ ಕಡತ ಮತ್ತು ಪತ್ರಿಕಾ ಪ್ರಕಟಣೆ ತನಿಖಾ ತಂಡಕ್ಕೆ ದೊರಕಿಲ್ಲ. ೨೦೧೫ ರಿಂದ ೨೦೧೮ರ ಕಡತದಲ್ಲಿ ಎಂಜಿನಿಯರ್‌ಗಳ ನೇಮಕಾತಿ ಸಂದರ್ಭದಲ್ಲಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ವೆಚ್ಚ ಪಾವತಿಗೆ ಅನುಮತಿಗಾಗಿ ಮಂಡಿಸಿರುವುದು ಲಭ್ಯವಿರುವ ಪ್ರತ್ಯೇಕ ಟಿಪ್ಪಣಿ ಹಾಳೆಯ ನಕಲು ಪ್ರತಿಯಿಂದ ಕಂಡುಬಂದಿರುವುದಾಗಿ ವರದಿಯಲ್ಲಿ ದಾಖಲಿಸಿದೆ.

ನಕಲು ಪ್ರತಿಯಲಲ್ಲಿ ಎಂಜಿನಿಯರ್ ಹುದ್ದೆಗೆ ೨೪ ಅರ್ಜಿಗಳು ಸ್ವೀಕೃತವಾಗಿದ್ದು, ೨೪ ಅರ್ಜಿಗಳ ಯಾವುದೇ ವಿವರವನ್ನು ನಮೂದಿಸದೆ ಕೇವಲ ಅರ್ಹರೆಂದು ಮೂವರು ಅಭ್ಯರ್ಥಿಗಳನ್ನು ಮೌಲ್ಯಮಾಪನ ಆಧಾರದ ಮೇಲೆ ನೇಮಕ ಮಾಡಲು ೨೫.೨.೨೦೧೭ರಲ್ಲಿ ಕಡತ ಮಂಡಿಸಲಾಗಿದೆ. ವಿವಾದಿತ ನೌಕರರ ನೇಮಕಾತಿ ನಿಯಮಬಾಹಿರವಾಗಿದ್ದು, ಇದಕ್ಕೆ ಹಿಂದಿನ ಯೋಜನಾ ವ್ಯವಸ್ಥಾಪಕ ನರೇಶ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.