ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ದಂತ ವೈದ್ಯಕೀಯ ಕ್ಷೇತ್ರ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು ಕೋಲ್ಗೇಟ್ ಪಾಮೋಲಿವ್ ಸಂಸ್ಥೆ ನಿರ್ದೇಶಕ ಮಂಡಳಿ ನಿಕಟಪೂರ್ವ ಅಧ್ಯಕ್ಷ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿನೋದ್ ನಂಬಿಯಾರ್ ಹೇಳಿದ್ದಾರೆ.ವಿರಾಜಪೇಟೆಯ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ 25ನೇ ಪದವಿ ಪ್ರದಾನ ಸಮಾರಂಭದಲ್ಲಿ ದೀಪ ಬೆಳಗಿಸಿ ಅವರು ಮಾತನಾಡಿದರು.
ದಂತ ವೈದ್ಯಕೀಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡುವತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಕೃತಕ ಬುದ್ಧಿಮತ್ತೆ, ಡಿಜಿಟಲ್ ಡೆಂಟಲ್ ಪರಿಣತಿ ಹೊಂದಲು ಪ್ರಯತ್ನ ಪಡಬೇಕು. ಈ ವಿಭಾಗಗಳಲ್ಲಿ ಕಲಿಸುವ ಉಪನ್ಯಾಸಕರು ಇಲ್ಲ. ನಾವೇ ಆಸಕ್ತಿ ವಹಿಸಿ ಕಲಿತು ಇತರರಿಗೂ ತಿಳಿಯಪಡಿಸಬೇಕು ಎಂದು ಕಿವಿಮಾತು ಹೇಳಿದರು.ಭಾರತೀಯ ದಂತವೈದ್ಯಕೀಯ ಸಂಸ್ಥೆ ವಿಶೇಷ ಒಲಂಪಿಕ್ಸ್ ಮತ್ತು ದಂತ ಕ್ರೀಡಾ ವೈದ್ಯಕೀಯ ಶಾಸ್ತ್ರದ ರಾಷ್ಟ್ರೀಯ ನಿರ್ದೇಶಕ ಡಾ. ರೀನಾ ರಂಜಿತ್ ಕುಮಾರ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪ್ರಯೋಗ, ಆವಿಷ್ಕಾರಗಳ ಬಗ್ಗೆ ಅಧ್ಯಯನ ಮಾಡಬೇಕು. ಕ್ರೀಡಾ ದಂತ ವೈದ್ಯಕೀಯ ಶಾಸ್ತ್ರದ ಬಗ್ಗೆ ಕಲಿಯಲು ಉತ್ಸುಕರಾಗಬೇಕು ಎಂದು ಕರೆ ನೀಡಿದರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯ ಡೀನ್ ಡಾ.ಸುನೀಲ್ ಮುದ್ದಯ್ಯ ಮಾತನಾಡಿ, ದಂತ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ 25ನೇ ವರ್ಷದ ಪದವಿ ಪ್ರದಾನ ಸಮಾರಂಭ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಏಷಿಯಾ ಉಪಖಂಡ ಸೇರಿದಂತೆ ಇತರ ದೇಶಗಳ ದಂತ ವೈದ್ಯಕೀಯ ಮಹಾವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ದಂತ ಶಾಸ್ತ್ರದ ಮಾಹಿತಿಗಳನ್ನು ಪೂರೈಸಿಕೊಂಡು ಬಂದಿದೆ ಎಂದು ವಿವರಿಸಿದರು.ಕಾಲೇಜಿನ ಕ್ರೀಡಾ ದಂತ ವೈದ್ಯಕೀಯಶಾಸ್ತ್ರ ವಿಭಾಗ ಆರಂಭಿಸುವ ಯೋಜನೆ ಹಮ್ಮಿಕೊಂಡಿಕೊಂಡಿರುವುದಾಗಿ ಮಾಹಿತಿ ನೀಡಿದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ.ಸಿ.ಪೊನ್ನಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಉಪಪ್ರಾಂಶುಪಾಲ ಡಾ. ಜಿತೇಶ್ ಜೈನ್ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ಇದ್ದರು. ವಿದ್ಯಾರ್ಥಿಗಳಿಂದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳ ಪ್ರದರ್ಶನಗಳು ಮೂಡಿಬಂದವು.ಒಟ್ಟು 26 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮತ್ತು 40 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಡಾ. ಕೊಕ್ಕಲೇರ ಕುಂಕುಂ ನಾಣಯ್ಯ ಮತ್ತು ಡಾ. ಕವನಾ ಪಿ. ಅವರಿಗೆ ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆ. ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಶೈಕ್ಷಣಿಕ ಸಾಧನೆಗಾಗಿ ಡಾ. ಲೀಥೀಯಾ ಸಕ್ರಿಯ ಅವರು ಪಡೆದುಕೊಂಡರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕ ಡಾ. ಶಶಿಧರ್ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ಯಪ್ಪ ನಿರೂಪಿಸಿ, ವಂದಿಸಿದರು.ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ಪಡೆದ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೊಷಕರು ಹಾಜರಿದ್ದರು.