ಸಾರಾಂಶ
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಕರಡಿಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಮುಸಲಾಪೂರ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಕನಕಗಿರಿ
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಕರಡಿಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಮುಸಲಾಪೂರ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.ತಾಲೂಕಿನ ಜಾಲಿಹುಡಾ, ಓಬಳಬಂಡಿ ಹಾಗೂ ಮುಸಲಾಪೂರ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶ ಇರುವುದರಿಂದ ಮತ್ತು ಇಲ್ಲಿ ಹೆಚ್ಚು ರೈತರು ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಆಹಾರ ಅರಸಿ ಕರಡಿಗಳು ರಸ್ತೆಯಲ್ಲಿ ಓಡಾಡುವುದು ಸಹಜ. ಆದರೆ ಡಿ.10ರ ಮಂಗಳವಾರ ಬೆಳಗಿನ ಜಾವ ಮೂರು ವರ್ಷದ ಕರಡಿಯೊಂದು ರಸ್ತೆ ದಾಟುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಕರಡಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ಮಾಹಿತಿ ತಿಳಿದ ಅರಣ್ಯಾಧಿಕಾರಿ ಸುಭಾಷ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಕರಡಿಯ ಶವ ಸಂಸ್ಕಾರ ಮಾಡಲಾಗಿದೆ. ಸದರಿ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಅಲ್ಲದೇ ರಾತ್ರಿ ವೇಳೆ ವನ್ಯಜೀವಿಗಳು ಕಂಡರೆ ಅವುಗಳಿಗೆ ತೊಂದರೆ ಕೊಡುವುದಾಗಲಿ, ಗದರಿಸುವುದಾಗಲಿ ಮಾಡಬಾರದು. ದೂರದಿಂದಲೇ ಹಾರ್ನ್ ಮಾಡುವುದರಿಂದ ಪ್ರಾಣಿಗಳು ಓಡಿ ಹೋಗಲಿವೆ. ವನ್ಯಜೀವಿಗಳು ಯಾರಿಗೂ ತೊಂದರೆ ನೀಡಲು ಬಂದಿರುವುದಿಲ್ಲ. ಅವು ಆಹಾರ ಅರಸಿ ಬರುತ್ತವೆ. ಹಾಗಾಗಿ ಯಾರೂ ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ ಎಂದು ಅರಣ್ಯಾಧಿಕಾರಿ ಮನವಿ ಮಾಡಿದ್ದಾರೆ.ಇಂದಿನಿಂದ ಜಿಪಿಎಸ್ ಅಳವಡಿಸುವ ವಿಶೇಷ ಅಭಿಯಾನ:
ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಜಿಪಿಎಸ್ ಅಳವಡಿಸುವ ಕುರಿತಂತೆ ಡಿ. 11 ಮತ್ತು ಡಿ. 12ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಹಾಗೂ ಪ್ರತಿಯೊಬ್ಬ ಫಲಾನುಭವಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಟಿಸ್ ಜಾರಿ ಮಾಡಿ ಮನೆಗಳನ್ನು ಪೂರ್ಣಗೊಳಿಸಲು ಆಯಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿಗಮದಿಂದ ನಿರ್ದೇಶಿಸಲಾಗಿದೆ.ಇನ್ನೂ ಪ್ರಾರಂಭಿಸದೇ ಇರುವ ಮನೆಗಳು 3687 ಆಗಿವೆ. ತಳಪಾಯ ಹಂತದಲ್ಲಿರುವ 5169, ಲಿಂಟಲ್ ಹಂತದಲ್ಲಿರುವ 4451 ಹಾಗೂ ಛಾವಣಿ ಹಂತದ 1928 ಮನೆಗಳು ಪ್ರಗತಿಯಲ್ಲಿವೆ. ಜಿಲ್ಲೆಯ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಪ್ರಗತಿಯಲ್ಲಿರುವ ಮನೆಗಳನ್ನು (ಛಾವಣಿ ಮತ್ತು ರೂಫ್) ಹಾಗೂ 2021-22ನೇ ಸಾಲಿನ ಪ್ರಾರಂಭಿಸದೇ ಇರುವ ಮನೆಗಳನ್ನು ಪ್ರಾರಂಭಿಸಿ ಡಿ. 11 ಮತ್ತು ಡಿ. 12ರಂದು ಬೆಳಗ್ಗೆ 8 ರಿಂದ ಪ್ರತಿ ಗ್ರಾಪಂಯಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಖುದ್ದಾಗಿ ಪಿಡಿಒಗಳು, ಜಿಪಿಎಸ್ ಮುಖಾಂತರ ಮನೆಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಜಿಪಂ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.