ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆ ವತಿಯಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳಿಗಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ತೆರೆ ಕಂಡಿದೆ. ಹೈಫ್ಲೈಯರ್ಸ್ ಕಪ್-2024ರಲ್ಲಿ ಬಲಿಷ್ಠ ಚೇಂದಂಡ ತಂಡ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಫೈನಲ್ ಪ್ರವೇಶಿಸಿದ್ದ ಮುರುವಂಡ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಮಂಗಳವಾರ ಮಧ್ಯಾಹ್ನದ ನಂತರ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಮುರುವಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಆರಂಭದಿಂದಲೇ ಸಂಘಟಿತ ಆಟಕ್ಕೆ ಒತ್ತು ನೀಡಿದ ಚೇಂದಂಡ ಆಟಗಾರರು ಆಗಿಂದಾಗಗ್ಗೆ ಎದುರಾಳಿಗಳ ಡಿ ಆವರಣದೊಳಗೆ ದಾಳಿ ನಡೆಸುತ್ತಿದ್ದರು. 2ನೇ ಕ್ವಾರ್ಟರ್ ಅಂತ್ಯದವರೆಗೂ ಉಭಯ ತಂಡಗಳು ಗೋಲು ಸಂಪಾದಿಸುವಲ್ಲಿ ಯಶಸ್ವಿಯಾಗಿರಲಿಲ್ಲ. 3ನೇ ಕ್ವಾರ್ಟರ್ ಅವಧಿ ಆರಂಭಗೊಳ್ಳುತ್ತಿದ್ದಂತೆ ಚೇಂದಂಡ ತಂಡ ಆಟದ ವೇಗ ಮತ್ತಷ್ಟು ಹೆಚ್ಚಿಸಿದಂತಿತ್ತು.
ಚೇಂದಂಡ ತಂಡಕ್ಕೆ ದೊರೆತ ಉತ್ತಮ ಪಾಸ್ ಬಳಸಿಕೊಂಡ ತಂಡದ ಅತಿಥಿ ಆಟಗಾರ ಅವಿನಿಶ್ ಮಂದಪ್ಪ 35ನೇ ನಿಮಿಷದಲ್ಲಿ ಮೊದಲನೇ ಫೀಲ್ಡ್ ಗೋಲು ದಾಖಲಿಸಿದರು. ಮುರುವಂಡ ತಂಡಕ್ಕೆ ದೊರೆತ ಉತ್ತಮ ಅವಕಾಶ ಸದುಪಯೋಗಪಡಿಸಿಕೊಂಡ ಆಟಗಾರ ಮಿಥುನ್ ಅಣ್ಣಯ್ಯ 38ನೇ ನಿಮಿಷದಲ್ಲಿ ಮಿಂಚಿನ ಗೋಲು ಬಾರಿಸಿ ಅಂತರ ಸಮವಾಗಿಸಿದರು.ಉತ್ತಮ ಪಾಸ್‌ಗಳೊಂದಿಗೆ ಆಟ ಮುಂದುವರಿಸಿದ ಚೇಂದಂಡ ತಂಡ ಬಹಳಷ್ಟು ಬಾರಿ ಎದುರಾಳಿ ತಂಡದ ಡಿ ಆವರಣದೊಳಗೆ ಲಗ್ಗೆ ಇಟ್ಟರೂ ಮುರುವಂಡ ತಂಡದ ಗೋಲ್ ಕೀಪರ್ ತಡೆಗೋಡೆಯಂತೆ ನಿಂತು ಚೆಂಡನ್ನು ತಡೆದರು.
4ನೇ ಕ್ವಾರ್ಟರ್ ಅವಧಿ ಆರಂಭಗೊಳ್ಳುತ್ತಿದ್ದಂತೆ ಚೇಂದಂಡ ತಂಡದ ಅತಿಥಿ ಆಟಗಾರ ಅವಿನಿಶ್ ಮಂದಪ್ಪ ಕೊನೆಯ 55ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲು ದಾಖಲಿಸಿ ಗೆಲವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಎರಡೂ ತಂಡಗಳ ಆಟಗಾರರ ಸಂಘಟಿತ ಶ್ರಮದಿಂದಾಗಿ ಬಳಿಕ ಗೋಲು ದಾಖಲಾಗಲಿಲ್ಲ. ವಿಜೇತ ಚೇಂದಂಡ ತಂಡಕ್ಕೆ 3 ಮತ್ತು ಮುರುವಂಡ ತಂಡಕ್ಕೆ 2 ಪೆನಾಲ್ಟಿ ಕಾರ್ನರ್ ದೊರೆತರೂ ಯಾವುದೂ ಗೋಲಾಗಿ ಪರಿವರ್ತನೆಯಾಗಲಿಲ್ಲ.
ಇದಕ್ಕೂ ಮೊದಲು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಆಟಗಾರರಿಗೆ ಶುಭಕೋರುವ ಮೂಲಕ ಫೈನಲ್ ಪಂದ್ಯ ಉದ್ಘಾಟಿಸಿದರು.ತೃತೀಯ ಪ್ರಶಸ್ತಿ:
ಸೆಮಿ ಫೈನಲ್ಸ್‌ಗಳಲ್ಲಿ ಪರಾಭವಗೊಂಡ ಚಂದುರ ಮತ್ತು ತೀತಮಾಡ ಕುಟುಂಬ ತಂಡಗಳ ನಡುವೆ ಮಂಗಳವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಚಂದುರ ತಂಡವು ತೀತಮಾಡ ತಂಡವನ್ನು 5-1 ಗೋಲುಗಳಿಂದ ಮಣಿಸಿ ತೃತೀಯ ಬಹುಮಾನ ಗೆದ್ದುಕೊಂಡಿತು. ಉತ್ತಮ ಪ್ರದರ್ಶನ ತೋರಿದ ಚಂದುರ ತಂಡದ ಅತಿಥಿ ಆಟಗಾರ ಚಿರನ್ ಮೇದಪ್ಪ ಮತ್ತು ಗ್ಯಾನ್ ಪಂದ್ಯದುದ್ದಕ್ಕೂ ಗಮನ ಸೆಳೆದರು. ವಿಜೇತ ತಂಡದ ಪರ ಗ್ಯಾನ್ 18ನೇ ಮತ್ತು 28ನೇ ನಿಮಿಷದಲ್ಲಿ ಸತತ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಮತ್ತೋರ್ವ ಅತಿಥಿ ಆಟಗಾರ ಚಿರನ್ ಮೇದಪ್ಪ 35ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಅತಿಥಿ ಆಟಗಾರ ಸೋಮಯ್ಯ 45ನೇ ನಿಮಿಷದಲ್ಲಿ ಹಾಗೂ ಇನ್ನೋರ್ವ ಅತಿಥಿ ಆಟಗಾರ ಧನುಷ್ 52ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರ ಹೆಚ್ಚಿಸಿದರು. ಪರಾಜಿತ ತೀತಮಾಡ ತಂಡದ ಪರವಾಗಿ ಅತಿಥಿ ಆಟಗಾರ ರಿತಿಕ್ ಕೊನೆಯ ಅವಧಿಯ 57ನೇ ನಿಮಿಷದಲ್ಲಿ ಗೋಲು ಹೊಡೆದರು.
ವಿಶೇಷ ಪುರಸ್ಕಾರಗಳು:ಪಂದ್ಯಾವಳಿಯ ವಿವಿಧ 8 ವಿಭಾಗಗಳ ವಿಶೇಷ ಪುರಸ್ಕಾರಗಳನ್ನು ಘೋಷಣೆ ಮಾಡಲಾಯಿತು.
ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಚೇಂದಂಡ ತಂಡದ ಮೋಕ್ಷಿತ್ ಉತ್ತಪ್ಪ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುರುವಂಡ ತಂಡದ ಕಾರ್ಯಪ್ಪ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಕೀರ್ತಿಗೆ ಚೇಂದಂಡ ತಂಡದ ಅತಿಥಿ ಆಟಗಾರ ಅವಿನಿಶ್ ಮಂದಪ್ಪ ಪಾತ್ರರಾದರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ತೀತಮಾಡ ತಂಡದ ಕಾಳಪ್ಪ, ಅತ್ಯುತ್ತಮ ಹಾಫ್ ಆಟಗಾರ ಪ್ರಶಸ್ತಿಯನ್ನು ಮುರುವಂಡ ತಂಡದ ರೋಹನ್ ಅಯ್ಯಣ್ಣ, ಅತ್ಯುತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಚೇಂದಂಡ ತಂಡದ ಬೋಪಣ್ಣ, ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಚಂದುರ ತಂಡದ ಗ್ಯಾನ್ ಪಡೆದುಕೊಂಡರೆ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ತೀತಮಾಡ ತಂಡದ ಪ್ರದ್ಯುತ್ ಗಳಿಸಿದರು.ಫೈನಲ್ ನಲ್ಲಿ ಪಂದ್ಯಾವಳಿ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ನೇತೃತ್ವದಲ್ಲಿ ಪಟ್ರಪಂಡ ಸಚಿನ್ ಮಂದಣ್ಣ ಮತ್ತು ಚಂದಪ್ಪಣ್ಣ ಆಕಾಶ್ ಚಂಗಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ಲೋಕೇಶ್ ನಂಜಪ್ಪ ತಾಂತ್ರಿಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರು.
ಹಿರಿಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು. ಫೈನಲ್ ಪಂದ್ಯದ ಬಿಡುವಿನ ಅವಧಿಯಲ್ಲಿ ಪೊವ್ವದಿ ಮಹಿಳಾ ಸಮಾಜದ ಪದಾಧಿಕಾರಿಗಳಿಂದ ಹಾಗೂ ಸ್ಥಳೀಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಮಾರೋಪ ಸಮಾರಂಭ:
ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ವಿಜೇತರಿಿಗೆ ನಗದು ಬಹುಮಾನದೊಂದಿಗೆ ಕಳೆದ ಬಾರಿಯಂತೆ ಶುದ್ಧ ಬೆಳ್ಳಿಯ ಟ್ರೋಫಿಗಳನ್ನು ನೀಡಲಾಯಿತು.
ಹಾಕಿ ವಿಶ್ವಕಪ್ ವಿಜೇತ, ಅಂತಾರಾಷ್ಟ್ರೀಯ ಮಾಜಿ ಆಟಗಾರ ಪೈಕೆರ ಕಾಳಯ್ಯ, ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಉದ್ಯಮಿ ನಂಬುಡುಮಾಡ ಎಸ್. ನರೇಂದ್ರ, ಉದ್ಯಮಿ ಮುಂಡಂಡ ವರುಣ್ ಗಣಪತಿ, ಕೊಡಗು ಹೋಟೆಲ್ಸ್, ರೆಸ್ಟೋರೆಂಟ್ಸ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಕುಂಡ್ಯೂಳಂಡ ದಿನೇಶ್ ಕಾರ್ಯಪ್ಪ, ಸ್ಥಳಿಯ ಕಾಫಿ ಬೆಳೆಗಾರ ಚೇಮಿರ ಪ್ರಕಾಶ್ ಪೂವಯ್ಯ, ಮಳವಂಡ ಬೋಜಮ್ಮ ಅಚ್ಚಪ್ಪ, ಕೊಂಗಂಡ ಕಿಶೋರ್ ಕಾವೇರಪ್ಪ, ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಮತ್ತಿತರರಿದ್ದರು.ವಿ.ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಿ. ಗೀತಾಂಜಲಿ, ಸಹ ಶಿಕ್ಷಕಿ ಮಳವಂಡ ಶೈಲ ಕಾವೇರಮ್ಮ ಹಾಗೂ ಹೆಸರಾಂತ ಅಥ್ಲೆಟ್ ಮುರುವಂಡ ಸ್ಪೂರ್ತಿ ಸೀತಮ್ಮ ಅವರನ್ನು ಗೌರವಿಸಲಾಯಿತು.