ಯಲಹಂಕ ಕೋಗಿಲು ಲೇಔಟ್ ಬಳಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಬೆಂಗಳೂರು : ಯಲಹಂಕ ಕೋಗಿಲು ಲೇಔಟ್ ಬಳಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
14 ದಿನಗಳ ಕಾಲ ಪೊಲೀಸರ ವಶಕ್ಕೆ
ಸ್ಥಳೀಯರಿಂದ ಹಣ ಪಡೆದು ಅನಧಿಕೃತ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜನಪ್ಪ ಮತ್ತು ರಾಬೀನ್ ಎಂಬುವರು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿಜಯ್, ವಾಸಿಂ ಉಲ್ಲಾ ಬೇಗ್ ಅವರನ್ನು ಬುಧವಾರ ಬಂಧಿಸಿದ್ದರು. ಆರೋಪಿಗಳನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಕೋಗಿಲು ಗ್ರಾಮದಲ್ಲಿ ಅಕ್ರಮ ನಿರ್ಮಾಣಕ್ಕಾಗಿ ಇಬ್ಬರನ್ನು ಬಂಧಿಸಿದ ನಂತರ ಮೂರನೇ ಬಂಧನದ ಬಗ್ಗೆ ಪೊಲೀಸರು ಸುಳಿವು ನೀಡಿದ್ದಾರೆ. ಯಲಹಂಕದ ಕೋಗಿಲು ಗ್ರಾಮದ ವಾಸಿಂ ಲೇಔಟ್, ಫಕೀರ್ ಲೇಔಟ್ ಮತ್ತು ಓಲ್ಡ್ ಫಕೀರ್ ಲೇಔಟ್‌ನಲ್ಲಿ ಸರ್ಕಾರಿ ಜಮೀನು ಕಬಳಿಕೆ ಮತ್ತು ಒತ್ತುವರಿಯಾಗಿದೆ. ಇದರಲ್ಲಿ ವಾಸಿಂ ಲೇಔಟ್‌ನಲ್ಲಿ ಹೆಚ್ಚು ಅಕ್ರಮ ನಡೆದಿದೆ.
4 ರಿಂದ 7 ಲಕ್ಷ ರು.ವರೆಗೂ ಹಣ ಪಡೆದು ನಕಲಿ ದಾಖಲೆ ಸೃಷ್ಟಿ
ಆರೋಪಿಗಳಾದ ವಿಜಯ್ ಮತ್ತು ವಾಸಿಂ ಸ್ಥಳೀಯ ನಿವಾಸಿಗಳಿಂದ 4 ರಿಂದ 7 ಲಕ್ಷ ರು.ವರೆಗೂ ಹಣ ಪಡೆದು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಹಕ್ಕುಪತ್ರಗಳನ್ನು ಕೂಡ ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತನಿಖೆ ವೇಳೆ ಆರೋಪಿಗಳು ಜಾಗ ಕೊಡಿಸುತ್ತೇವೆಂದು ಹಲವರ ಬಳಿ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರಿ ಭೂಮಿ ಒತ್ತುವರಿ, ವಂಚನೆ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ನಕಲಿ ದಾಖಲೆ ನೀಡಿರುವುದರ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಜನರಿಂದ ಹಣ ಪಡೆದಿದ್ದಾರೆ? ಯಾವ ದಾಖಲೆಗಳನ್ನು ನಕಲಿ ಮಾಡಲಾಗಿದೆ ಎಂದು ತನಿಖೆ ಮಾಡುತ್ತಿದ್ದೇವೆ. ಯಾರೆಲ್ಲ ವಂಚನೆಗೊಳಗಾದವರಿಗೆ ದೂರು ನೀಡಲು ಹೇಳಿದ್ದೇವೆ. ಆ ದೂರಿನ ಆಧಾರದಲ್ಲಿ ತನಿಖೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.