ಕಡೂರುಪಟ್ಟಣದ ಛತ್ರದ ಬೀದಿಯಲ್ಲಿರುವ ಶ್ರೀ ವಾಸವಿ ದೇವಾಲಯಕ್ಕೆ ಹೊಂದಿಕೊಂಡಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಸಂಭಂದಿಸಿದ ಮುಜರಾಯಿ ಆಸ್ತಿ(ಕಪ್ಪು ಹೆಂಚಿನ ಮನೆ)ಗೆ ಮಂಗಳವಾರ ಬೆಂಕಿ ತಗುಲಿದ್ದು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ ಘಟನೆ ನಡೆದಿದೆ.

ಸ್ಥಳಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಛತ್ರದ ಬೀದಿಯಲ್ಲಿರುವ ಶ್ರೀ ವಾಸವಿ ದೇವಾಲಯಕ್ಕೆ ಹೊಂದಿಕೊಂಡಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಸಂಭಂದಿಸಿದ ಮುಜರಾಯಿ ಆಸ್ತಿ(ಕಪ್ಪು ಹೆಂಚಿನ ಮನೆ)ಗೆ ಮಂಗಳವಾರ ಬೆಂಕಿ ತಗುಲಿದ್ದು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ ಘಟನೆ ನಡೆದಿದೆ. ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಇಲಾಖೆ (ಮುಜುರಾಯಿ)ಗೆ ಸೇರಿದ್ದು ಎನ್ನಲಾಗಿರುವ ಕೋಟ್ಯಾಂತರ ರು. ಬೆಲೆ ಬಾಳುವ ಆಸ್ತಿಯಲ್ಲಿ ಕಪ್ಪು ಹೆಂಚಿನ ಮನೆಗಳಿದ್ದು ತುಂಬ ಶಿಥಿಲವಾಗಿವೆ. ಮಂಗಳವಾರ ಆಕಸ್ಮಿಕ ಬೆಂಕಿಗೆ ಮನೆ ಮೇಲ್ಚಾವಣಿ ಹತ್ತಿ ಉರಿದಿದ್ದು ಸ್ಥಳೀಯರು ಅಗ್ನಿ ಶಾಮಕ ಠಾಣೆಗೆ ತಿಳಿಸಿದ್ದರಿಂದ ಯಾವುದೇ ಅವಘಡ ಸಂಭವಿಸದೆ ಬೆಂಕಿ ನಂದಿಸಲಾಗಿದೆ. ಬುಧವಾರ ಸ್ಥಳಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಭೇಟಿ ನೀಡಿ ಪರಿಶೀಲನೆ ಮಾಡಿದರು ಸ್ಥಳೀಯರಾದ ಕೆ.ಎಚ್.ಶಿವಶಂಕರ್, ತಹಸೀಲ್ದಾರ್ ಗೆ ಮನವಿ ಮಾಡಿ ಕಳೆದ ಅನೇಕ ವರ್ಷಗಳಿಂದ ಪಾಳು ಬಿದ್ದಿರುವ ಈ ಆಸ್ತಿಯನ್ನು ಸಂರಕ್ಷಿಸಲು ತಾವು ಅನೇಕ ಬಾರಿ ತಹಸೀಲ್ದಾರ್ ಮತ್ತು ಸಂಬಂದಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಅಕ್ಕಪಕ್ಕದ ನಿವಾಸಿಗರಿಗೆ ಈ ಪಾಳು ಮನೆಯನ್ನು ನಿರ್ಗತಿಕರು, ಭಿಕ್ಷುಕರು ವಾಸ ಸ್ಥಳವನ್ನಾಗಿ ಮಾಡಿಕೊಂಡು ನಿತ್ಯ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.ಮತ್ತೋರ್ವ ನಿವಾಸಿ ಮೂರ್ತಿರಾವ್ ಮಾತನಾಡಿ, ಕೋಟ್ಯಾಂತರ ರೂ ಬೆಲೆ ಬಾಳುವ ಈ ಆಸ್ತಿಯನ್ನು ಮುಜರಾಯಿ ಇಲಾಖೆ ನಿರ್ಲಕ್ಷ್ಯ ಮಾಡಿದ್ದು ಅನೇಕ ಭೂಗಳ್ಳರು ಇದನ್ನು ಬರೆಸಿಕೊಳ್ಳುವ ಸಂಚು ಮಾಡುತ್ತಿದ್ದಾರೆ. ಸರ್ಕಾರದ ಆಸ್ತಿ ಕಾಪಾಡುವುದು ಅಧಿಕಾರಿಗಳ ಕರ್ತವ್ಯ. ತಾವು ಭೇಟಿ ನೀಡಿ ಪರಿಶೀಲನೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ ಸ್ಥಳೀಯರು ಕೂಡಲೆ ಈ ಪಾಳು ಮನೆಗಳನ್ನು ಕೆಡವಿಸಿ ಸುತ್ತಲು ಕಾಪೌಂಡ್ ನಿರ್ಮಿಸಿದರೆ ಅಕ್ಕಪಕ್ಕದ ಹಾಗೂ ಸರ್ಕಾರದ ಆಸ್ತಿಗೂ ರಕ್ಷಣೆ ದೊರಕುತ್ತದೆ ಎಂದು ಮನವಿ ಮಾಡಿದರು. ತಹಸೀಲ್ದಾರ್ ಮಾತನಾಡಿ ಪರಿಶೀಲನೆ ಮಾಡಿದ್ದು ತುಂಬಾ ಶಿಥಿಲವಾದ ಮನೆಗಳನ್ನು ಕೆಡವಿಸಿ ಕಾಂಪೌಂಡು ನಿರ್ಮಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆದು ಅತಿ ಶೀಘ್ರವೇ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದರು.ಸ್ಥಳೀಯರಾದ ಶ್ರೀಕಾಂತ್,ಶ್ರೀನಿವಾಸ್ ಮತ್ತಿತರರು ಇದ್ದರು.7ಕೆಕೆಡಿಯು4. ಕಡೂರು ಛತ್ರದ ಬೀದಿಯಲ್ಲಿರುವ ಮುಜರಾಯಿ ಇಲಾಖೆಗೆ ಸಂಭಂಧಿಸಿದ ಆಸ್ತಿಗೆ ಬೆಂಕಿ ತಗುಲಿದ್ದನ್ನು ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದರು.