ಕೋಲಾರ ಜಿಲ್ಲಾ ಪ್ರವಾಸೋದ್ಯಮಕ್ಕೆ ಉತ್ತೇಜನ

| Published : Sep 29 2025, 01:02 AM IST

ಸಾರಾಂಶ

ಪ್ರವಾಸೋದ್ಯಮವು ವಿಶ್ವದಲ್ಲಿಯೇ ಅತಿ ದೊಡ್ಡ ಎರಡನೇ ಉದ್ದಿಮೆಯಾಗಿದ್ದು, ಕೋಲಾರ ಜಿಲ್ಲೆಗೆ ೨೪ ಗಂಟೆಗಳೊಳಗಾಗಿ ಭೇಟಿ ನೀಡಿ ವಾಪಸಾಗುವ ವಿಹಾರಾರ್ಥಿಗಳು ಹಾಗೂ ಇಲ್ಲಿಯೇ ವಾಸ್ತವ್ಯ ಇರುವ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಒಂದು ವರ್ಷದೊಳಗೆ ಕ್ರಮವಹಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪ್ರವಾಸಗಳ ಏರ್ಪಾಡು, ಪ್ರವಾಸಿ ಏಜೆಂಟರ ನೇಮಕ ಹಾಗೂ ವಾರಾಂತ್ಯದ ಕೋಲಾರ ದರ್ಶನ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ ಎನ್.ಪವಾರ್ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳು ಇದ್ದರೂ, ಪ್ರವಾಸೋದ್ಯಮ ಜನಪ್ರಿಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ದೊಡ್ಡ ಉದ್ಯಮ

ಪ್ರವಾಸೋದ್ಯಮವು ವಿಶ್ವದಲ್ಲಿಯೇ ಅತಿ ದೊಡ್ಡ ಎರಡನೇ ಉದ್ದಿಮೆಯಾಗಿದ್ದು, ಕೋಲಾರ ಜಿಲ್ಲೆಗೆ ೨೪ ಗಂಟೆಗಳೊಳಗಾಗಿ ಭೇಟಿ ನೀಡಿ ವಾಪಸಾಗುವ ವಿಹಾರಾರ್ಥಿಗಳು ಹಾಗೂ ಇಲ್ಲಿಯೇ ವಾಸ್ತವ್ಯ ಇರುವ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಒಂದು ವರ್ಷದೊಳಗೆ ಕ್ರಮವಹಿಸಿ, ಮುಂದಿನ ಪ್ರವಾಸೋಧ್ಯಮ ದಿನಾಚರಣೆ ದೊಡ್ಡ ವೇದಿಕೆಯಲ್ಲಿ ಆಚರಿಸಲು ಪ್ರಯತ್ನಿಸುವುದಾಗಿ ವಿವರಿಸಿದರು.ಜಿಲ್ಲೆಯಲ್ಲಿ ಪ್ರವಾಸಿ ಮಾರ್ಗದರ್ಶಿಗಳು ಉತ್ಸಾಹದಿಂದ ಗೈರು ಹಾಜರಾಗದೆ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರವಾಸಿ ತಾಣಗಳ ಜೊತೆಗೆ ಉತ್ತಮ ಹೋಟೆಲ್, ಆಹಾರ ವೈವಿಧ್ಯತೆ ಪರಿಚಯಿಸುವ ತಾಣಗಳ ಸಂಖ್ಯೆಯು ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಕಲಾಕೃತಿಗಳನ್ನು ಸಂರಕ್ಷಿಸಿ

ಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಮುನಿಶಾಮಪ್ಪ ಮಾತನಾಡಿ, ಶಿಲಾ ಶಿಲ್ಪಗಳು ಮತ್ತು ವೀರಗಲ್ಲುಗಳ ಮಹತ್ವ ಅರಿಯದೆ ಕಟ್ಟಡ ನಿರ್ಮಾಣಕ್ಕೆ ಬಳಸುವುದು ಹಾಗೂ ಧಾರ್ಮಿಕ ಮಹತ್ವ ಕಲ್ಪಿಸಿ ಪೂಜೆಗೊಳಪಡಿಸುವುದರ ಬದಲು ಜಿಲ್ಲೆಯ ಐತಿಹ್ಯಗಳ ಕುರುಹುಗಳನ್ನು ಜತನದಿಂದ ಕಾಪಾಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಇತಿಹಾಸ ಪ್ರಜ್ಞೆ ಜಾಗೃತಗೊಳಿಸಬೇಕಿದೆ ಎಂದು ಸಲಹೆ ನೀಡಿದರು.ಕಾಲೇಜಿನ ಪ್ರವಾಸೋಧ್ಯಮ ಕೋರ್ಸಿನ ಮುಖ್ಯಸ್ಥ ಮಹೇಶ್ ಮಾತನಾಡಿ, ಪ್ರವಾಸಿ ಕೇಂದ್ರಗಳನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಆಗ ಮಾತ್ರ ಭಾರತ ವಿಶ್ವದ ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಲಿದೆ ಎಂದರು.

ಪ್ರವಾಸಿ ಕೇಂದ್ರದ ಅರ್ಹತೆ

ಇತಿಹಾಸ ಪ್ರಾಧ್ಯಾಪಕ ಡಾ.ಅರಿವು ಶಿವಪ್ಪ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಹತ್ತನೇ ಶತಮಾನದಲ್ಲಿಯೇ ಸಾವಿನಾರ್ಮಿಡಿ ಎಂಬ ಮಹಿಳೆಯೊಬ್ಬರು ಸಕಲ ವಿದ್ಯೆ ಪಾರಂಗತವಾಗಿರುವ ಶಾಸನ ಬೆಂಗಳೂರಿನಲ್ಲಿದೆ, ಜಿಲ್ಲೆಯಲ್ಲಿ ಇಂತ ಮಹತ್ವಗಳನ್ನು ಹೊಂದಿರುವ ಪ್ರತಿ ಗ್ರಾಮವು ಪ್ರವಾಸಿ ಕೇಂದ್ರವಾಗುವ ಅರ್ಹತೆ ಪಡೆದುಕೊಂಡಿದೆ, ಅರಾಭಿಕೊತ್ತನೂರಿನಲ್ಲಿ ವೀರಗಲ್ಲುಗಳ ಪಾರ್ಕ್ ನಿರ್ಮಾಣ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.

ಪತ್ರಕರ್ತರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಈ ವರ್ಷದ ಸುಸ್ಥಿರ ಪರಿವರ್ತನೆಯ ಧ್ಯೇಯ ವಾಕ್ಯವು ಕೋಲಾರ ಜಿಲ್ಲೆಗೆ ಹೆಚ್ಚು ಅನ್ವಯವಾಗಬೇಕಿದೆ, ಭಾಷಾ ಸೌಹಾರ್ಧತೆಯ ಕೋಲಾರ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ, ಭೌಗೋಳಿಕವಾಗಿ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ, ಚಾರಣ ಪೂರಕ, ಸಾಂಸ್ಕೃತಿಕ ಮಹತ್ವ ಸಾರುವ ನೂರಾರು ಕೇಂದ್ರಗಳಿವೆ. ಅವುಗಳನ್ನು ಪ್ರವಾಸಿ ತಾಣಗಳಾಗಿ ಮಾರ್ಪಡಿಸಿ, ಮೂಲಸೌಕರ್ಯ ಕಲ್ಪಿಸಿದರೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು, ಇದಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದರು.ಮಾರ್ಗದರ್ಶಿ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಪ್ರಶಸ್ತಿಯನ್ನು ರೆಡ್ಡೆಮ್ಮ ರಿಗೆ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಎಂ.ಹರ್ಷಿತಾ, ಎಂ.ತೇಜಸ್ವಿನಿ, ಎಂ.ಚಂದನ, ಚಿತ್ರಕಲೆ ಸ್ಪರ್ಧೆಯಲ್ಲಿ ಗೆದ್ದ ಉಮೇರಾ, ಎಂ.ದಿನೇಶ್, ಎಂ.ಸುಪ್ರಜಾ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಟಿ.ಎಸ್. ರುದ್ರಕುಮಾರ್, ಎಂ.ಅಮೃತವರ್ಷಿಣಿ, ಟಿ.ಎಂ.ಸ್ಪಪ್ನ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ರುದ್ರಕುಮಾರ್, ಆರ್.ಸುಪ್ರೀತ್, ನಾಗಭೂಷಣ್ ಮತ್ತು ಬಿ.ನಿತಿನ್‌ಕುಮಾರ್‌ರಿಗೆ ಬಹುಮಾನಗಳನ್ನು ನೀಡಿ ಸತ್ಕರಿಸಲಾಯಿತು. ಪ್ರವಾಸಿ ಮಾರ್ಗದರ್ಶಿ ಚಂದ್ರಶೇಖರ್, ಆನಂದಕುಮಾರ್ ಇದ್ದರು.