ಕನ್ನಡಪಪ್ರಭ ವಾರ್ತೆ ಕುಶಾಲನಗರ

ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆರಂಭಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕೂಡಿಗೆ ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ. ಗಣಪತಿ, ಸರ್ಕಾರವು ಸರ್ಕಾರಿ ಪಿಯು ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದನ್ನು ಮನಗಂಡು ವಿಜ್ಞಾನ ಉಪನ್ಯಾಸಕರಿಗೆ ಇಂತಹ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಲು ತರಬೇತಿ ಹಮ್ಮಿಕೊಂಡಿದೆ ಎಂದರು.

ನೋಡಲ್ ಅಧಿಕಾರಿ ಹಾಗೂ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿ, ಕೊಡಗು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ವರ್ಷ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ ಎಂದರು.


ಸಂಪನ್ಮೂಲ ಉಪನ್ಯಾಸಕಿ ದಮಯಂತಿ ಕಾರ್ಯಾಗಾರದ ಉದ್ದೇಶ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಯಟ್ ನ ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಉಪನ್ಯಾಸಕರ ಬೋಧನಾ ಸಾಮರ್ಥ್ಯ ಹಾಗೂ ವೃತ್ತಿ ಕ್ಷಮತೆಯನ್ನು ವೃದ್ಧಿಸಲು ಸಾಧ್ಯವಾಗುತ್ತವೆ ಎಂದರು.

ನೋಡಲ್ ಅಧಿಕಾರಿ ಹೇಮಂತ್ ರಾಜ್ ಇದ್ದರು. ಸಂಪನ್ಮೂಲ ಉಪನ್ಯಾಸಕರಾದ ಮೋಹನ್ ಸ್ವಾಗತಿಸಿದರು ಕೆ.ಎನ್. ಪಲ್ಲವಿ ವಂದಿಸಿದರು. ಎಸ್.ಎಚ್. ಈಶ ನಿರೂಪಿಸಿದರು.