ಕನ್ನಡಪ್ರಭ ವಾರ್ತೆ ಬೆಂಗಳೂರು ಕೆಪಿಎಸ್‌ಸಿ ಪಶು ವೈದ್ಯಕೀಯ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಸೋರಿಕೆಯಾಗಿದ್ದ ಪ್ರಶ್ನೆಪತ್ರಿಕೆ ಪ್ರತಿಗಾಗಿ ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ಮುಂದುವರೆಸಿದ್ದಾರೆ. ದೇವನಹಳ್ಳಿ ಸಮೀಪದಲ್ಲಿರುವ ಆರೋಪಿ ಜ್ಞಾನೇಂದ್ರ ಕುಮಾರ್‌ಗೆ ಸೇರಿದ್ದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಪರಿಶೀಲನೆಯನ್ನೂ ನಡೆಸಿದ್ದಾರೆ.ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟ ರೆಸಾರ್ಟ್ ಬಳಿಯೇ ಐಪಿಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಸೇರಿದ್ದ ಫ್ಲ್ಯಾಟ್‌ ಇದೆ. ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟ ಸಂದರ್ಭದಲ್ಲಿ ಇದೇ ಫ್ಲ್ಯಾಟ್‌ನಲ್ಲಿಯೇ ಜ್ಞಾನೇಂದ್ರ ವಾಸವಿದ್ದರು ಎನ್ನಲಾಗಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಈ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈಗ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ರೆಸಾರ್ಟ್‌ನಲ್ಲೇ ಅಭ್ಯರ್ಥಿಗಳಿಗೆ 5 ದಿನಗಳ ತರಬೇತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಜ್ಞಾನೇಂದ್ರ ಈ ಫ್ಲ್ಯಾಟ್‌ನಿಂದಲೇ ಓಡಾಟ ನಡೆಸಿದ್ದರು. ಹೀಗಾಗಿ ಈ ಫ್ಲ್ಯಾಟ್‌ನಲ್ಲಿಯೇ ಪ್ರಶ್ನೆಪತ್ರಿಕೆಗಾಗಿ ಸಿಐಡಿ ತಂಡ ಹುಡುಕಾಟ ನಡೆಸಿದೆ.ಕೆಪಿಎಸ್ಸಿ ಹಗರಣ: ಅಕ್ರಮದ ದೂರುದಾರನಿಗೆ ಬೆದರಿಕೆ ಕರೆ:ಕೆಪಿಎಸ್‌ಸಿ ಪಶು ವೈದ್ಯಕೀಯ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರುದಾರ ಡಾ.ಮಂಜುನಾಥ್‌ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಆರೋಪ ಕೇಳಿ ಬಂದಿದೆ.ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿ ಮಂಜುನಾಥ್‌ ಅವರು ಅಕ್ರಮದಲ್ಲಿ ಭಾಗಿಯಾಗಿ ಉತ್ತೀರ್ಣರಾದ 29 ಅಭ್ಯರ್ಥಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರು. ಆ ಅಭ್ಯರ್ಥಿಗಳ ಸ್ನೇಹಿತರು ಮತ್ತು ಸಂಬಂಧಿಕರು ಮಂಜುನಾಥ್‌ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಇದರ ಆಡಿಯೋ ವೈರಲ್‌ ಆಗಿದೆ.ಆಡಿಯೋದಲ್ಲಿ ಏನಿದೆ?:

‘ನಾವು ಬೆಂಗಳೂರಿಗೆ ಬರುತ್ತೇವೆ, ನಿಮ್ಮನ್ನು ಸುಮ್ಮನೆ ಬಿಡಲ್ಲ. ನಿಮ್ಮ ಮನೆಗೆ ರೇಷನ್‌ ಕೂಡ ಸಿಗದಂತೆ ಮಾಡುತ್ತೇವೆ. ನೀವು ಏನು ದಾಖಲೆ ಇಟ್ಟುಕೊಂಡು ದೂರು ಕೊಟ್ಟಿದ್ದೀರಾ? ಹೆಚ್ಚು ಅಂಕಗಳು ಬಂದಿರುವವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದೀರಾ? ಅಭ್ಯರ್ಥಿಗಳ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಯಾರು ಅಕ್ರಮ ಎಸಗಿದ್ದಾರೋ ಅವರ ವಿರುದ್ಧ ಹೋರಾಡಿ. ಆಗ ನಾವು ನಿಮಗೆ ಶಹಬ್ಬಾಸ್‌ಗಿರಿ ಕೊಡುತ್ತೇವೆ. ನೀವು ಬೇಕಾದರೆ ಹೋರಾಟ ಮಾಡಿ ನಿಮಗೆ ಊಟ ಹಾಕುತ್ತೇವೆ. ನೀವು ಎಲ್ಲಿ ಇರುತ್ತೀರಾ? ನಮ್ಮ ಕಡೆ ಲಾಯರ್‌ಗಳು ಇದ್ದಾರೆ, ನಿಮ್ಮ ‌ಮೇಲೆ ಕೇಸ್ ಹಾಕುತ್ತೇವೆ’ ಎಂದು ಬೆದರಿಕೆ ಹಾಕಲಾಗಿದೆ.